ಉದಯವಾಹಿನಿ , ಮುಂಬೈ: ಕುಖ್ಯಾತ ನಕ್ಸಲ್ ಕಮಾಂಡರ್ ಮತ್ತು ಕೇಂದ್ರ ಸಮಿತಿ ಸದಸ್ಯ (ಸಿಸಿಎಂ) ರಾಮಧೇರ್ ಮಜ್ಜಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಈತನನ್ನು ಇತ್ತೀಚೆಗೆ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಹಿದ್ಮಾಗೆ ಸಮಾನವೆಂದು ಪರಿಗಣಿಸಲಾಗಿದೆ. ಮಜ್ಜಿ ತಲೆಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಛತ್ತೀಸ್‌ಗಢ ಬಕರ್ ಕಟ್ಟಾದ ಪೊಲೀಸ್ ಠಾಣೆಯಲ್ಲಿ ಮಜ್ಜಿ ಶರಣಾಗಿದ್ದಾನೆ. ಮಜ್ಜಿ ಜೊತೆಗೆ ಚಂದು ಉಸೆಂಡಿ, ಲಲಿತಾ, ಜಾನಕಿ, ಪ್ರೇಮ್, ರಾಮಸಿಂಗ್ ದಾದಾ, ಸುಕೇಶ್ ಪೊಟ್ಟಮ್, ಲಕ್ಷ್ಮಿ, ಶೀಲಾ, ಸಾಗರ್, ಕವಿತಾ ಮತ್ತು ಯೋಗಿತಾ ಎಂಬ ನಕ್ಸಲರು ಸಹ ಶರಣಾಗಿದ್ದಾರೆ. ಇವರ ಶರಣಾಗತಿಯೊಂದಿಗೆ, ಮಹಾರಾಷ್ಟ್ರ , ಮಧ್ಯಪ್ರದೇಶ, ಛತ್ತೀಸ್‌ಗಢ ವಲಯಗಳು ನಕ್ಸಲ್ ಮುಕ್ತವಾಗುತ್ತಿದೆ ಎಂದು ವರದಿಯಾಗಿದೆ. ಬಾಲಘಾಟ್‌ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಮುಂದೆ ನಾಲ್ವರು ಮಹಿಳೆಯರು ಸೇರಿದಂತೆ ಹತ್ತು ನಕ್ಸಲರು ಶರಣಾದರು. ಅವರಿಗೆ ಸಂವಿಧಾನದ ಪ್ರತಿಯನ್ನು ನೀಡುವ ಮೂಲಕ ಮುಖ್ಯವಾಹಿನಿಗೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಶರಣಾದ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದರು.
