ಉದಯವಾಹಿನಿ , ಹೈದರಾಬಾದ್: ತೆಲಂಗಾಣ ಸರ್ಕಾರವು ಅಮೆರಿಕದ 45ನೇ ಮತ್ತು 47ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ರಾಜ್ಯದಲ್ಲಿನ ಯುಎಸ್ ಕಾನ್ಸುಲೇಟ್ ಜನರಲ್ ರಸ್ತೆಗೆ ಮರುನಾಮಕರಣ ಮಾಡಲು ನಿರ್ಧರಿಸಿದೆ. ಹೈದರಾಬಾದ್‌ನಲ್ಲಿರುವ ಯುನೈಟೆಡ್ ಸ್ಟೇಟ್ಸ್ ಕಾನ್ಸುಲೇಟ್ ಜನರಲ್‌ನ ಹೈ ಪ್ರೊಫೈಲ್ ರಸ್ತೆಯನ್ನು ಡೊನಾಲ್ಡ್ ಟ್ರಂಪ್ ಅವೆನ್ಯೂ ಎಂದು ಕರೆಯಲು ನಿರ್ಧರಿಸಲಾಗಿದೆ.
ರಾಜ್ಯ ಸರ್ಕಾರವು ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಅಮೆರಿಕ ರಾಯಭಾರ ಕಚೇರಿಗೆ ಪತ್ರ ಬರೆದು ಯೋಜನೆಗಳ ಬಗ್ಗೆ ತಿಳಿಸಲಿದೆ. ಈ ವರ್ಷದ ಆರಂಭದಲ್ಲಿ, ದೆಹಲಿಯಲ್ಲಿ ನಡೆದ ವಾರ್ಷಿಕ ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆ ವೇದಿಕೆ (ಯುಎಸ್‌ಐಎಸ್‌ಪಿಎಫ್) ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹೈದರಾಬಾದ್‌ನ ಪ್ರಮುಖ ರಸ್ತೆಗಳಿಗೆ ಪ್ರಮುಖ ಜಾಗತಿಕ ಕಂಪನಿಗಳ ಹೆಸರಿಡಲು ಪ್ರಸ್ತಾಪಿಸಿದ್ದರು.
ಈ ಪ್ರಸ್ತಾವನೆ, ಭಾರತವನ್ನು ಪ್ರತಿನಿಧಿಸುವ ರಾಜ್ಯವಾಗಿ ತೆಲಂಗಾಣವನ್ನು ನಿರ್ಮಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಉಪಕ್ರಮದ ಭಾಗವಾಗಿದೆ. ಜೊತೆಗೆ, ಪ್ರತಿಷ್ಠಿತ ವ್ಯಕ್ತಿಗಳು ಮತ್ತು ಸಂಸ್ಥೆಗಳ ಗೌರವ ಮತ್ತು ಗುರುತಿನ ಚಿಹ್ನೆಯಾಗಿ ಇನ್ನೂ ಕೆಲವು ರಸ್ತೆಗಳನ್ನು ಮೀಸಲಿಡುವ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ.
ನಗರದ ರವಿರ್ಯಾಲದಲ್ಲಿರುವ ನೆಹರು ಹೊರ ವರ್ತುಲ ರಸ್ತೆ ಮತ್ತು ಹೊಸದಾಗಿ ಪ್ರಸ್ತಾಪಿಸಲಾದ ರೇಡಿಯಲ್ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಂಬರುವ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ದಿವಂಗತ ಕೈಗಾರಿಕೋದ್ಯಮಿ ಪದ್ಮಶ್ರೀ ರತನ್ ಟಾಟಾ ಅವರ ಹೆಸರಿಡಲಾಗುವುದು. ಸರ್ಕಾರ ಈ ಹಿಂದೆ ರವಿರ್ಯಾಲದಲ್ಲಿರುವ ಇಂಟರ್‌ಚೇಂಜ್‌ನ ಹೆಸರನ್ನು ಟಾಟಾ ಇಂಟರ್‌ಚೇಂಜ್ ಎಂದು ಬದಲಾಯಿಸಿತ್ತು.
