ಉದಯವಾಹಿನಿ , ಮುಂಬೈ: ಭಾರತ ತಂಡದ ಮಾಜಿ ನಾಯಕ ಎಂ ಎಸ್‌ ಧೋನಿ ಅವರನ್ನು ಟೀಮ್ ಇಂಡಿಯಾ ಮಾಜಿ ಆಟಗಾರ ಮುರಳಿ ವಿಜಯ್‌ ಹಾಡಿ ಹೊಗಳಿದ್ದಾರೆ. ಅವರು ಭಾರತ ತಂಡ ಕಂಡ ಶ್ರೇಷ್ಠ ಮತ್ತು ಉತ್ತಮ ನಾಯಕ. ಅವರ ಶಾಂತ ಸ್ವಭಾವ ಮತ್ತು ನಿರ್ಧಾರಗಳು ಭಾರತೀಯ ಕ್ರಿಕೆಟ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಧೋನಿಯವರಂತಹ ಉತ್ತಮ ಪ್ರತಿಭೆಯುಳ್ಳ ಆಟಗಾರ ಭಾರತದಲ್ಲಿ ಜನಿಸಿರುವುದಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು ಎಂದು ತಮಿಳುನಾಡು ಮಾಜಿ ಬ್ಯಾಟ್ಸ್‌ಮನ್‌ ಗುಣಗಾನ ಮಾಡಿದ್ದಾರೆ.

ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಪರ ಕಣಕ್ಕಿಳಿಯಲಿರುವ ಎಂ ಎಸ್‌ ಧೋನಿ ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. 2007ರ ಟಿ20 ವಿಶ್ವಕಪ್‌ ಮತ್ತು 2013ರ ಚಾಂಪಿಯನ್ಸ್‌ ಟ್ರೋಫಿಯವರೆಗೆ ಅವರು ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಹಾಗೂ ಅವರ ನಾಯಕತ್ವದಲ್ಲಿ ಟೆಸ್ಟ್‌ ಶ್ರೇಯಾಂಕದಲ್ಲಿ ಭಾರತ ತಂಡ ಅಗ್ರ ಸ್ಥಾನಕ್ಕೇರಿತು ಎಂದು ಮುರಳಿ ವಿಜಯ್‌ ಶ್ಲಾಘಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮುರಳಿ ವಿಜಯ್‌, “ಧೋನಿ ಸಹಜ ಮತ್ತು ಬಹಳ ವಿಶಿಷ್ಟ. ನೀವು ಆ ವ್ಯಕ್ತಿತ್ವವನ್ನು ಪುನರಾವರ್ತಿಸಲು ಸಾಧ್ಯವಿಲ್ಲ. ಅವರು ಮಾಡಿರುವುದನ್ನು ಯಾರೂ ಮಾಡಲು ಸಾಧ್ಯವಿಲ್ಲ. ಅವರು ತಂಡವನ್ನು ಪ್ರಾಬಲ್ಯಗೊಳಿಸಿದ ಮತ್ತು ತೆಗೆದುಕೊಂಡು ಹೋದ ರೀತಿಯನ್ನು ನೋಡಿದರೆ, ಅವರು ತುಂಬಾ ಬಲಿಷ್ಠ ವ್ಯಕ್ತಿಯಾಗಿದ್ದರು. ಅವರು ಆ ಸಿಕ್ಸರ್‌ಗಳನ್ನು ಸಿಡಿಸುತ್ತಿದ್ದ ಶೈಲಿ ವಿಭಿನ್ನವಾದದ್ದು,” ಎಂದು ಅವರು ಹೇಳಿದ್ದಾರೆ. 2007ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಧೋನಿಯವರು ತೆಗೆದುಕೊಂಡ ನಿರ್ಧಾರ ಅವರ ಸಹಜ ಚಿಂತನೆಗೆ ಉದಾಹರಣೆ. ಅಂತಿಮ ಓವರ್‌ನಲ್ಲಿ ಎದುರಾಳಿ ಪಾಕಿಸ್ತಾನಕ್ಕೆ 13 ರನ್‌ಗಳ ಅಗತ್ಯವಿದ್ದಾಗ ಹಿರಿಯ ಸ್ಪಿನ್‌ ಬೌಲರ್‌ ಹರ್ಭಜನ್‌ ಸಿಂಗ್‌ ಅವರ ಒಂದು ಓವರ್‌ ಬಾಕಿ ಇದ್ದರೂ ಕೂಡ, ಜೋಗಿಂದರ್‌ ಶರ್ಮಾ ಅವರ ಕೈಯಲ್ಲಿ ಬೌಲ್‌ ಮಾಡಿಸಿದ್ದು ಪಂದ್ಯದ ದಿಕ್ಕನ್ನೆ ಬದಲಿಸಿತು ಎಂದು ಮುರಳಿ ವಿಜಯ್‌ ಹೇಳಿದರು.

Leave a Reply

Your email address will not be published. Required fields are marked *

error: Content is protected !!