ಉದಯವಾಹಿನಿ , ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ತಂಡಗಳು ರಾಜಕೀಯ ಕಾರಣಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ್ವಿಪಕ್ಷೀಯ ಸರಣಿಗಳನ್ನು ಆಡುತ್ತಿಲ್ಲ. ಆದರೆ, ಐಸಿಸಿ ಹಾಗೂ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಆಯೋಜನೆಯ ಟೂರ್ನಿಗಳಲ್ಲಿ ಮಾತ್ರ ಈ ಎರಡು ತಂಡಗಳು ಕಾದಾಟ ನಡೆಸಲಿವೆ. ಮತ್ತೊಂದು ಕಡೆ ಭಾರತದಲ್ಲಿ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿಯೂ ಪಾಕ್‌ ಆಟಗಾರರಿಗೆ ಆಡಲು ಅವಕಾಶ ನೀಡಲಾಗುವುದಿಲ್ಲ. ಅಂದ ಹಾಗೆ ವಿರಾಟ್‌ ಕೊಹ್ಲಿಗೆ ಪಾಕಿಸ್ತಾನದಲ್ಲಿಯೂ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಆದರೆ, ಕೊಹ್ಲಿಯನ್ನು ಬಿಟ್ಟು 2025ರಲ್ಲಿ ಭಾರತದ ಒಬ್ಬ ಯುವ ಆಟಗಾರನನ್ನು ಪಾಕಿಸ್ತಾನದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಾಟವನ್ನು ನಡೆಸಲಾಗಿದೆ. ಈ ಆಟಗಾರನ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಹಲವು ಬಾರಿ ಮುಖಾಮುಖಿಯಾಗಿವೆ. ಕಳೆದ ವರ್ಷ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹಾಗೂ ಈ ವರ್ಷ ನಡೆದಿದ್ದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಈ ಎರಡೂ ತಂಡಗಳು ಕಾದಾಟ ನಡೆಸಿದ್ದವು. ಆದರೆ, ಈ ಎರಡೂ ಟೂರ್ನಿಗಳಲ್ಲಿ ಭಾರತ ತಂಡ, ಪಾಕ್‌ ಎದುರು ಪ್ರಾಬಲ್ಯ ಸಾಧಿಸಿತ್ತು ಹಾಗೂ ಟೀಮ್‌ ಇಂಡಿಯಾ ಚಾಂಪಿಯನ್ಸ್‌ ಆಗಿತ್ತು.

ಕಳೆದ ಏಷ್ಯಾ ಕಪ್‌ ಟೂರ್ನಿಯಲ್ಲಿ ಅಭಿಷೇಕ್‌ ಶರ್ಮಾ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಅವರು ಈ ಟೂರ್ನಿಯಲ್ಲಿ 44.85ರ ಸರಾಸರಿ ಮತ್ತು 200ರ ಸ್ಟ್ರೈಕ್‌ ರೇಟ್‌ನಲ್ಲಿ 314 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಅದರಲ್ಲಿಯೂ ವಿಶೇಷವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ 13 ಎಸೆತಗಳಲ್ಲಿ 31 ರನ್‌ಗಳನ್ನು ಸಿಡಿಸಿದ್ದರು. ನಂತರ ಫೈನಲ್‌ನಲ್ಲಿ ಕೇವಲ 39 ಎಸೆತಗಳಲ್ಲಿ 74 ರನ್‌ಗಳನ್ನು ಬಾರಿಸಿದ್ದರು. ಇದಾದ ಬಳಿಕ ಪಾಕಿಸ್ತಾನದಲ್ಲಿ ಅಭಿಷೇಕ್‌ ಶರ್ಮಾ ಅವರ ಬಗ್ಗೆ ಗೂಗಲ್‌ ಸರ್ಚ್‌ನಲ್ಲಿ ಸಾಕಷ್ಟು ಹುಡುಕಾಟ ನಡೆಸಲ್ಪಟ್ಟ ವಿಶ್ವದ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!