ಉದಯವಾಹಿನಿ, ಬೆಳಗಾವಿ: ಪವರ್ ಶೇರಿಂಗ್ ಬಗ್ಗೆ ಚರ್ಚೆ ಬೇಡ ಅಂತ ಸಿಎಂ ಹಾಗೂ ಡಿಸಿಎಂ ಕದನ ವಿರಾಮ ಘೋಷಿಸಿದ್ರೂ, ಕಾಂಗ್ರೆಸ್ ನಾಯಕರು ಗಡಿ ದಾಟಿದ್ದಾರೆ. ಸ್ವತಃ ಸಿದ್ದರಾಮಯ್ಯ ಪುತ್ರ ಹಾಗೂ ಮೇಲ್ಮನೆ ಸದಸ್ಯ ಯತೀಂದ್ರ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ. 5 ವರ್ಷವೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ನಾಯಕತ್ವ ಬದಲಾವಣೆಗೆ ಕಾರಣಗಳಿಲ್ಲ ಅಂದಿದ್ದಾರೆ. ಇದಕ್ಕೆ ಕೆಲ ʻಕೈʼನಾಯಕರೇ ಅಸಮಾಧಾನ ಹೊರಹಾಕ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರನಿಗೆ ವಾರ್ನಿಂಗ್‌ ಕೊಟ್ಟಿದ್ದಾರೆ.

ಬೆಳಗಾವಿಯ ಸರ್ಕಿಟ್‌ ಹೌಸ್‌ಗೆ ಪುತ್ರನನ್ನ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ಪದೇ ಪದೇ ಈ ರೀತಿ ಮಾತನಾಡದಂತೆ ಕಿವಿಮಾತು ಹೇಳಿದ್ದಾರೆ. ಏನಿದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ, ನೀನು ಮಾತನಾಡುವುದು ಬೇಡ. ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಸೂಚನೆ ಇದೆ. ಯಾರೂ ಮಾತನಾಡುತ್ತಿಲ್ಲ ನೀನೊಬ್ಬನೇ ಮಾತನಾಡಿದರೆ ಬೇರೆ ಸಂದೇಶ ಹೋಗುತ್ತೆ. ಅಧಿವೇಶನ ಸಮಯದಲ್ಲಿ ಅನಗತ್ಯ ಗೊಂದಲ ಆಗುವುದು ಬೇಡ ಅಂತ ಸಿಎಂ ಕಿವಿಮಾತು ಹೇಳಿರುವುದಾಗಿ ಆಪ್ತಮೂಲಗಳು ತಿಳಿಸಿವೆ.
ಇನ್ನೂ ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲ. ಡಿಕೆ ಸಿಎಂ ಆದ್ರೆ ಸಂಪುಟದಲ್ಲಿ ಸಚಿವರಾಗಲು ಬಯಸಲ್ಲ ಅಂತ ಮಾಜಿ ಸಚಿವ ರಾಜಣ್ಣ ಪುನರುಚ್ಚರಿಸಿದ್ದಾರೆ. ಆದ್ರೆ, ಸಿಎಂ ಸಿದ್ದರಾಮಯ್ಯ ಪುತ್ರನ ಹೇಳಿಕೆಯನ್ನ ಸಮರ್ಥಿಸದೇ ಹೈಕಮಾಂಡ್ ಹೆಗಲಿಗೆ ಹಾಕಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್, ಹೈಕಮಾಂಡ್ ಕಡೆ ಕೈ ತೋರಿಸಿ ಸೈಲೆಂಟ್ ಆಗಿದ್ದಾರೆ. ಜನವರಿ ಮೊದಲ ವಾರದಲ್ಲಿ ಮಾತನಾಡ್ತೀವಿ ಅಂದಿದ್ದಾರೆ. ಕುರ್ಚಿ ಕಿತ್ತಾಟದ ಮಧ್ಯೆ ಅಧಿವೇಶನ ಮುಗಿಯುತ್ತಿದ್ದಂತೆ ಸಿಎಂ ಹಾಗೂ ಡಿಸಿಎಂಗೆ ಹೈಕಮಾಂಡ್ ಬುಲಾವ್ ನೀಡೋ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

error: Content is protected !!