ಉದಯವಾಹಿನಿ, ನವದೆಹಲಿ: ಕಾಂಗ್ರೆಸ್ ಪಕ್ಷ ಓಲೈಕೆ ರಾಜಕಾರಣಕ್ಕಾಗಿ ವಂದೇ ಮಾತರಂ ಅನ್ನು ವಿಭಜಿಸದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ವಂದೇ ಮಾತರಂಗೆ 150 ವರ್ಷ ಪೂರ್ಣ ಹಿನ್ನೆಲೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ ದೇಶವು ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕಾರಣ ಸರಿಯಾದ ಮನ್ನಣೆ ಸಿಗಲಿಲ್ಲ ಎಂದು ಹೇಳಿದರು.
ವಂದೇ ಮಾತರಂ 50 ವರ್ಷಗಳನ್ನು ಪೂರೈಸಿದ ನಂತರ ಸೀಮಿತಗೊಳಿಸಲ್ಪಟ್ಟಾಗಲೇ ತುಷ್ಟೀಕರಣ ಪ್ರಾರಂಭವಾಯಿತು. ಆ ತುಷ್ಟೀಕರಣವು ದೇಶದ ವಿಭಜನೆಗೆ ಕಾರಣವಾಯಿತು. ಕಾಂಗ್ರೆಸ್ ವಂದೇ ಮಾತರಂ ಅನ್ನು ತುಷ್ಟೀಕರಣಕ್ಕಾಗಿ ವಿಭಜಿಸದಿದ್ದರೆ, ದೇಶವು ಎರಡು ಭಾಗವಾಗುತ್ತಿರಲಿಲ್ಲ. ವಂದೇ ಮಾತರಂ ಘೋಷಣೆಯನ್ನು ಪ್ರಚಾರ ಮಾಡಿದ ಮತ್ತು ಕೂಗಿದವರನ್ನು ಇಂದಿರಾ ಗಾಂಧಿ ಜೈಲಿಗೆ ಹಾಕಿದರು ಎಂದು ಹೇಳಿದರು.
ಲೋಕಸಭೆಯಲ್ಲಿ ವಂದೇ ಮಾತರಂ ಕುರಿತು ಚರ್ಚೆಗಳು ನಡೆಯುತ್ತಿದ್ದಾಗ ಗಾಂಧಿ ಕುಟುಂಬದ ಇಬ್ಬರು ಸದಸ್ಯರು ಸದನದಲ್ಲಿ ಇರಲಿಲ್ಲ, ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಪ್ರಸ್ತುತ ನಾಯಕತ್ವದವರೆಗೂ ಕಾಂಗ್ರೆಸ್ ವಂದೇ ಮಾತರಂ ಅನ್ನು ವಿರೋಧಿಸುತ್ತಲೇ ಇದೆ ಎಂದು ಕಿಡಿಕಾರಿದರು.
