ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ 2024ರಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಮತ್ತು ಅಮಾನತುಗೊಂಡ ತೃಣಮೂಲ ಕಾಂಗ್ರೆಸ್‌ನ ಪ್ರಬಲ ನಾಯಕ ಶಹಜಹಾನ್ ಶೇಖ್ ವಿರುದ್ಧದ ಪ್ರಮುಖ ಸಾಕ್ಷಿಯೊಬ್ಬರ ಪುತ್ರ ಬುಧವಾರ ನ್ಯಾಯಾಲಯಕ್ಕೆ ಹೋಗುವಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬೋಯರ್ಮರಿ ಬಳಿಯ ಬಸಂತಿ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ, ಸಾಕ್ಷಿದಾರ ಭೋಲಾ ಘೋಷ್ ಮತ್ತು ಅವರ ಮಗನನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಕಾರು ಮತ್ತು ಖಾಲಿ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಭೋಲಾ ಅವರ ಮಗ ಸತ್ಯಜಿತ್ ಘೋಷ್ ಮತ್ತು ಕಾರಿನ ಚಾಲಕ ಶಹನೂರ್ ಮೊಲ್ಲಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಅವರು ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಬಸಿರ್ಹತ್ ಉಪ-ವಿಭಾಗೀಯ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ. ವಾಹನವನ್ನು ಟ್ರಕ್ ಎಳೆದುಕೊಂಡು ಹತ್ತಿರದಲ್ಲಿದ್ದ ಕಾಲುವೆಗೆ ತಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಹೆದ್ದಾರಿಯ ಪಕ್ಕದಲ್ಲಿರುವ ಕಾಲುವೆ ಬಳಿ ಟ್ರಕ್ ನೇತಾಡುತ್ತಿರುವುದು ಕಂಡುಬಂದರೂ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.ಗಂಭೀರ ಗಾಯಗೊಂಡ ಘೋಷ್ ಅವರನ್ನು ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು ಎಂದು ಬಸಿರ್ಹತ್ ಪೊಲೀಸ್ ವರಿಷ್ಠಾಧಿಕಾರಿ ಹೊಸೈನ್ ಮೆಹೆದಿ ರೆಹಮಾನ್ ಹೇಳಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
