ಉದಯವಾಹಿನಿ, ನವದೆಹಲಿ: 2027ರ ಜನಗಣತಿಗೆ 11,718 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯೊಂದಿಗೆ 2 ಹಂತಗಳಲ್ಲಿ ಜನಗಣತಿ ನಡೆಸಲಾಗುತ್ತದೆ. 2026 ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ನಡೆಯುವ ಮೊದಲ ಹಂತದ ಜನಗಣತಿ ವೇಳೆ ಮನೆಗಳ ಗಣತಿ ಮಾಡಲಾಗುವುದು. 2027ರ ಫೆಬ್ರವರಿಯಲ್ಲಿ ಜನರ ಗಣತಿ ಪ್ರಕ್ರಿಯೆ ನಡೆಯಲಿದೆ. ಅಲ್ಲದೇ 2027ರ ಜನಗಣತಿಯು ಮೊದಲ ಡಿಜಿಟಲ್ ಗಣತಿಯಾಗಲಿದೆ. ದತ್ತಾಂಶ ಸಂರಕ್ಷಣೆಯನ್ನ ಗಮನದಲ್ಲಿಟ್ಟುಕೊಂಡು ಜನಗಣತಿ ಪ್ರಕ್ರಿಯೆಗೆ ಡಿಜಿಟಲ್ ವಿನ್ಯಾಸವನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯಾವಾಗಿನಿಂದ ಜನಗಣತಿ?
ಮುಖ್ಯವಾಗಿ 2025ರ ಜೂನ್ 16ರ ಗೆಜೆಟ್‌ನಲ್ಲಿ ಸೂಚಿಸಲಾದ ಜನಗಣತಿಯನ್ನ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ.
ಹಂತ I: ರಾಜ್ಯ/ಯುಟಿ ಸರ್ಕಾರಗಳ ಅನುಕೂಲಕ್ಕೆ ಅನುಗುಣವಾಗಿ ಏಪ್ರಿಲ್ ನಿಂದ ಸೆಪ್ಟೆಂಬರ್ 2026ರ ವರೆಗೆ 30 ದಿನಗಳ ಅವಧಿಯಲ್ಲಿ ಮನೆ ಪಟ್ಟಿ ಮತ್ತು ವಸತಿ ಜನಗಣತಿ.
ಹಂತ II: ಜನಸಂಖ್ಯಾ ಗಣತಿ (PE) ಫೆಬ್ರವರಿ 2027 ರಲ್ಲಿ ನಡೆಯಲಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಿಮದಿಂದ ಆವೃತ ಪ್ರದೇಶಗಳಲ್ಲಿ, ಹವಾಮಾನ ನಿರ್ಬಂಧಗಳಿಂದಾಗಿ PE ಸೆಪ್ಟೆಂಬರ್ 2026 ರಲ್ಲಿ ನಡೆಯಲಿದೆ ಎಂದು ವಿವರಿಸಿದ್ದಾರೆ.
2011ರಲ್ಲಿ ಕೊನೆಯದ್ದಾಗಿ ರಾಷ್ಟ್ರವ್ಯಾಪಿ ಜನಗಣತಿ ನಡೆಸಲಾಗಿತ್ತು. ಕೋವಿಡ್ ಕಾರಣದಿಂದಾಗಿ 2021ರಲ್ಲಿ ನಡೆಸಬೇಕಿದ್ದ ಜನಗಣತಿಯನ್ನ ಮುಂದೂಡಲಾಗಿತ್ತು. ಹೀಗಾಗಿ 2027ರಲ್ಲಿ ಗಣತಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಜನಗಣತಿ ಕಾರ್ಯದ ಜವಾಬ್ದಾರಿ ವಹಿಸಿಕೊಳ್ಳಲು ಅಗತ್ಯವಾಗಿರುವ ಅಧಿಕಾರಿಗಳ ನೇಮಕಾತಿಯನ್ನು ಜನವರಿ 15ರೊಳಗೆ ಪೂರ್ಣಗೊಳಿಸಬೇಕು ಎಂದು ಭಾರತೀಯ ನೋಂದಣಿಯ ಮಹಾನಿರ್ದೇಶನಾಲಯವು (ಆರ್‌ಜಿಐ) ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೊನ್ನೆಯಷ್ಟೇ ನಿರ್ದೇಶನ ನೀಡಿತ್ತು.
