ಉದಯವಾಹಿನಿ, ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಲೋಕಸಭೆಯಲ್ಲಿ ಇ-ಸಿಗರೇಟ್ ಬಳಕೆಯ ಬಗ್ಗೆ ತೀವ್ರ ಚರ್ಚೆಯ ನಡುವೆಯೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸೌಗತ ರಾಯ್ ಸಂಸತ್ತಿನ ಹೊರಗೆ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಸದನದಲ್ಲಿ ಸಂಸದ ಗಿರಿರಾಜ್‌ ಸಿಂಗ್‌ ಮತ್ತು ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಸಾರ್ವಜನಿಕ ಆರೋಗ್ಯ ಮತ್ತು ಸದನದ ಘನತೆಯ ಬಗ್ಗೆ ಮಾತನಾಡುತ್ತಾ, “ನೀವು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದ್ದೀರಿ ದಾದಾ” ಎಂದು ನೇರವಾಗಿ ಸಂಸದನ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಬಳಿಕ ಬಿಜೆಪಿ ಸಂಸದ ಅನುರಾಗ್‌ ಠಾಕೂರ್ ಮಾತನಾಡಿ, 2019ರಲ್ಲಿ ಇ-ಸಿಗರೇಟ್‌ಗಳನ್ನು ನಿಷೇಧಿಸಲಾಗಿದ್ದು, ಸಂಸದರು ಸದನದೊಳಗೆ ಇ-ಸಿಗರೇಟ್‌ ಸೇದಿದರೆ ಅದು ಸದನಕ್ಕೆ ಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಇದು ದುರದೃಷ್ಟಕರ ಘಟನೆ. ಅವರು ಸದನವನ್ನು ಎಷ್ಟು ಗೌರವಿಸುತ್ತಾರೆ ಎಂದು ತೋರಿಸುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಗರೇಟ್‌ ಸೇದಿದ್ದ ಟಿಎಂಸಿ ಸಂಸದ ಸೌಗತ್‌ ರಾಯ್‌, “ನಾನು ಅದರ ಬಗ್ಗೆ ಏನೂ ಹೇಳಲಾರೆ, ಏಕೆಂದರೆ ನಾನು ಸದನದಲ್ಲಿರಲಿಲ್ಲ. ಯಾರು ಧೂಮಪಾನ ಮಾಡಿದ್ದಾರೆ ಮತ್ತು ದೂರು ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಸದನದ ನಿಯಮಗಳ ಉಲ್ಲಂಘನೆಯಾಗಿದ್ದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು ಅದು ಸ್ಪೀಕರ್‌ ಅವರಿಗೆ ಬಿಟ್ಟ ವಿಚಾರ. ಇದಕ್ಕೆ ರಾಜಕೀಯ ಲೇಪನ ಬಳಿಯುವುದು ಬೇಡ,” ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!