ಉದಯವಾಹಿನಿ, ಛತ್ತೀಸ್‌ಗಢ: ಬಹಳ ಬೇಗನೆ ಶ್ರೀಮಂತರಾಗುವ ಬಯಕೆಯಿಂದ ಮೂವರು ಪ್ರಾಣ ಕಳೆದುಕೊಂಡ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಬಿಲಾಸ್‌ಪುರದ ಸ್ವಯಂ ಘೋಷಿತ ಮಾಂತ್ರಿಕನೊಬ್ಬ ನಡೆಸಿದ ವಾಮಾಚಾರದ ವಿಧಿವಿಧಾನಗಳ ವೇಳೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವರು ಸ್ವಇಚ್ಛೆಯಿಂದ ಈ ಆಚರಣೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದರು ಎನ್ನಲಾಗಿದೆ. ವಾಮಾಚಾರದ ಮೂಲಕ ಇವರು ತಮ್ಮಲ್ಲಿದ್ದ 5 ಲಕ್ಷ ರೂ.ಗಳನ್ನು 2.5 ಕೋಟಿ ರೂ.ಗಳನ್ನಾಗಿ ಮಾಡುವ ದುರಾಸೆ ಹೊಂದಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಕ್ರ್ಯಾಪ್ ವ್ಯಾಪಾರಿ ಮೊಹಮ್ಮದ್ ಅಶ್ರಫ್ ಮೆಮನ್, ತುಳಸಿ ನಗರದ ಸುರೇಶ್ ಸಾಹು ಮತ್ತು ದುರ್ಗ್‌ನ ನಿತೀಶ್ ಕುಮಾರ್ ಎಂಬವರು ಬಹಳ ಬೇಗನೆ ಕೋಟ್ಯಾಧಿಪತಿಯಾಗಬೇಕು ಎನ್ನುವ ದುರಾಸೆಯಿಂದ ಮಾಂತ್ರಿಕ ರಾಜೇಂದ್ರ ಕುಮಾರ್ ಎಂಬಾತನನ್ನು ಸಂಪರ್ಕಿಸಿದ್ದಾರೆ. ಇದಕ್ಕಾಗಿ ಮಾಂತ್ರಿಕ ಕೆಲವು ವಿಧಿವಿಧಾನಗಳು ಮಾಡಬೇಕು ಎಂದು ಹೇಳಿದ್ದು, ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಲು ಮೂವರು ಸ್ವಯಂ ಪ್ರೇರಿತರಾಗಿ ಒಪ್ಪಿಕೊಂಡಿದ್ದರು.
ಇದಕ್ಕಾಗಿ ಉರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಾರ್ಬಸ್‌ಪುರದ ಸ್ಕ್ರ್ಯಾಪ್‌ಯಾರ್ಡ್‌ಗೆ ಮಾಂತ್ರಿಕ ಮತ್ತು ಆತನ ಮೂವರು ಸಹಚರರನ್ನು ಕರೆಸಿಕೊಂಡ ಮೊಹಮ್ಮದ್ ಅಶ್ರಫ್ ಮೆಮನ್, ಸುರೇಶ್ ಸಾಹು ಮತ್ತು ನಿತೀಶ್ ಕುಮಾರ್ ಬಳಿಕ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸ್ಕ್ರ್ಯಾಪ್‌ಯಾರ್ಡ್‌ನ ಕೋಣೆಯಲ್ಲಿ ಮೂವರ ಶವ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ಸಿವಿಲ್ ಲೈನ್ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಮಾಂತ್ರಿಕ ಸೇರಿದಂತೆ ಐವರು ಶಂಕಿತರನ್ನು ಬಂಧಿಸಿದ್ದಾರೆ.
