ಉದಯವಾಹಿನಿ, ಬೆಂಗಳೂರು: ರಾಜಧಾನಿಯ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳದ ಅನುಕೂಲ ಮತ್ತು ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಪರಿಣತ ಸಲಹಾ ಸಂಸ್ಥೆಯ ಆಯ್ಕೆಗಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ಟೆಂಡರ್ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು 2026ರ ಜನವರಿ 12 ಕೊನೆಯ ದಿನವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಅವರು, ಎಂದು 2ನೇ ವಿಮಾನ ನಿಲ್ದಾಣಕ್ಕಾಗಿ ರಾಜ್ಯ ಸರ್ಕಾರವು ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲದ ಬಳಿ ಸ್ಥಳಗಳನ್ನು ಗುರುತಿಸಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡವು ಇವುಗಳ ಪರಿಶೀಲನೆ ನಡೆಸಿ, ಪ್ರಾಥಮಿಕ ವರದಿ ನೀಡಿದೆ. ಈಗ ಟೆಂಡರ್‌ನಲ್ಲಿ ಆಯ್ಕೆಯಾಗುವ ಸಲಹಾ ಸಂಸ್ಥೆಯು 5 ತಿಂಗಳಲ್ಲಿ ಸರ್ಕಾರಕ್ಕೆ ತನ್ನ ಸಮಗ್ರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿ ಕೊಡಬೇಕಾಗುತ್ತದೆ ಎಂದಿದ್ದಾರೆ.
ಕಳೆದ 5 ವರ್ಷಗಳಲ್ಲಿ ವಾರ್ಷಿಕವಾಗಿ 250 ಕೋಟಿ ರೂ. ಮೊತ್ತದ ಕೆಲಸಗಳನ್ನು ನಿರ್ವಹಿಸಿರುವಂತಹ ಮತ್ತು ಸದರಿ ಕ್ಷೇತ್ರದಲ್ಲಿ ಕನಿಷ್ಠ ಪಕ್ಷ ಐದು ಯೋಜನೆಗಳನ್ನಾದರೂ ನಿರ್ವಹಿಸಿರುವ/ಸಲಹಾ ವರದಿ ನೀಡಿರುವಂತಹ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಬಹುದು.
