ಉದಯವಾಹಿನಿ, ಅಶ್ಗಾಬತ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮತ್ತೆ ವಿಶ್ವವೇದಿಕೆಯಲ್ಲಿ ಮುಖಭಂಗವಾಗಿದೆ. ತುರ್ಕಮೆನಿಸ್ತಾನದ ಅಂತಾರಾಷ್ಟ್ರೀಯ ಶಾಂತಿ ಮತ್ತು ವಿಶ್ವಾಸ ವೇದಿಕೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಭೆಗಾಗಿ ಷರೀಫ್ 40 ನಿಮಿಷಗಳ ಕಾದುಕುಳಿತಿದ್ದ ಪ್ರಸಂಗ ನಡೆದಿದೆ.
ಹಿಂದಿನ ಸೋವಿಯತ್ ರಾಷ್ಟ್ರದ ತಟಸ್ಥ ಘೋಷಣೆಯ 30ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ ಈ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ರಷ್ಯಾ, ಟರ್ಕಿ, ಇರಾನ್ ಮತ್ತು ಪಾಕಿಸ್ತಾನದ ನಾಯಕರನ್ನ ಆಹ್ವಾನಿಸಲಾಗಿತ್ತು. ಪುಟಿನ್, ಟರ್ಕಿಶ್ ಅಧ್ಯಕ್ಷ ಎರ್ಡೋಗನ್ ಮತ್ತು ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ಕೂಡ ಅಂತಾರಾಷ್ಟ್ರೀಯ ಶಾಂತಿ ಮತ್ತು ವಿಶ್ವಾಸ ವೇದಿಕೆಯ ಸಭೆಯಲ್ಲಿ ಹಾಜರಿದ್ದರು.
ಈ ವೇಳೆ ಷರೀಫ್, ಪುಟಿನ್ ಜೊತೆಗೆ ನಿಗದಿತ ಮಾತುಕತೆಗಾಗಿ ಭೇಟಿಯಾಗಬೇಕಿತ್ತು. ಆದ್ರೆ ಪುಟಿನ್ 40 ನಿಮಿಷಗಳ ಕಾಲ ಕಾಯುವಂತೆ ಮಾಡಿದರು. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಅಲ್ಲದೇ 14 ಸೆಕೆಂಡುಗಳ ವಿಡಿಯೋನಲ್ಲಿ ಷರೀಫ್ ಅಸಮಾಧಾನದಿಂದ ಕಾಯುತ್ತಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಸೇರಿದಂತೆ ಷರೀಫ್ ಸಂಪುಟದ ಅಧಿಕಾರಿಗಳೂ ಪುಟಿನ್‌ಗಾಗಿ ಕಾದುಕುಳಿತಿದ್ದು ಕಂಡುಬಂದಿದೆ.
