ಉದಯವಾಹಿನಿ, ವಾಷಿಂಗ್ಟನ್: ರಷ್ಯಾ ಮತ್ತು ಉಕ್ರೇನ್ ಯುದ್ಧ ಅಂತ್ಯಗೊಳಿಸುವ ಒಪ್ಪಂದಕ್ಕೆ ನಾವು ಹಿಂದೆಂದಿಗಿಂತಲೂ ಇಂದು ಮತ್ತಷ್ಟು ಸಮೀಪದಲ್ಲಿದ್ದೇವೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಬರ್ಲಿನ್‌ಲ್ಲಿ ಅಮೆರಿಕದ ರಾಯಭಾರಿಗಳಾದ ಸ್ಟೀವ್ ವಿಟ್ರೋಫ್ ಮತ್ತು ಜರೇಡ್ ಕುಶ್ವೇರ್ ಅವರು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಮತ್ತು ಯುರೋಪಿಯನ್ ನಾಯಕರ ನಡುವಿನ ಮಾತುಕತೆ ಉದ್ದೇಶಿಸಿ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ.
ನಾನು ಈಗಾಗಲೇ 8 ಯುದ್ಧಗಳಿಗೆ ವಿರಾಮ ಘೋಷಿಸಿದ್ದೇನೆ. ಇದು 9ನೇಯದ್ದಾಗಿದೆ. ಈ ಯುದ್ಧಗಳ ಪೈಕಿ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧ ಕ್ಲಿಷ್ಟಕರವಾಗಿತ್ತು. ಆದರೆ, ನಾವು ಅದನ್ನೂ ಸರಿಪಡಿಸಿದ್ದೇವೆ ಎಂದಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಶಾಂತಿ ಮಾತುಕತೆಗಳ ಭಾಗವಾಗಿ, ಝಲೆನ್‌ಸ್ಕಿ ಮತ್ತು ಜರ್ಮನಿ, ಇಟಲಿ, ನ್ಯಾಟೋ, ಫಿನ್‌ಲ್ಯಾಂಡ್, ಫ್ರಾನ್ಸ್, ಬ್ರಿಟನ್, ಪೋಲೆಂಡ್, ನಾರ್ವೆ, ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ ನಾಯಕರ ಜೊತೆ ಅಮೆರಿಕ ರಾಯಭಾರಿಗಳ ಮಾತುಕತೆಯ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಯುದ್ಧ ವಿರಾಮ ಒಪ್ಪಂದದ ಪ್ರಕ್ರಿಯೆ ಸಾಂಗವಾಗಿ ನಡೆಯುತ್ತಿದೆ. ಕಳೆದ ತಿಂಗಳು ಈ ಯುದ್ಧದಲ್ಲಿ 27,000 ಸೈನಿಕರು ಕೊಲ್ಲಲ್ಪಟ್ಟಿದ್ದಾರೆ. ಈ ರೀತಿ ಎಂದಿಗೂ ಆಬಾರದಿತ್ತು’ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ. 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಮತ್ತೆ ಆಯ್ಕೆಯಾಗಿದ್ದರೆ ಉಕ್ರೇನ್ ಯುದ್ಧವೇ ಪ್ರಾರಂಭವಾಗುತ್ತಿರಲಿಲ್ಲ. ಅಂದು ಆರಂಭವಾದ ಯುದ್ಧವನ್ನು ಕೊನೆಗೊಳಿಸಲು ನಾವು ಯತ್ನಿಸುತ್ತಿದ್ದೇವೆ. ಅದು ಬೈಡನ್ ಅವರ ಅವಧಿಯಾಗಿತ್ತು… ನಾವು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಆ ಪ್ರಯತ್ನದಲ್ಲಿ ನಾವು ಈಗ ಮತ್ತಷ್ಟು ಹತ್ತಿರವಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ. ‘ಯುದ್ಧ ವಿರಾಮಕ್ಕೆ ನಾವು ಮತ್ತಷ್ಟು ಹತ್ತಿರವಾಗಿದ್ದೇವೆ. ಯುರೋಪಿಯನ್ ನಾಯಕರಿಂದ ಅದ್ಭುತ ಬೆಂಬಲ ಸಿಕ್ಕಿದೆ. ಈ ಸಂದರ್ಭದಲ್ಲಿ ರಷ್ಯಾ ಸಹ ಯುದ್ಧದ ಅಂತ್ಯ ಬಯಸುತ್ತಿದೆ. ಈ ಹಿಂದೆ ಒಂದು ದೇಶ ಯುದ್ಧ ಅಂತ್ಯಗೊಳಿಸಲು ಮುಂದಾದಾಗ ಮತ್ತೊಂದು ದೇಶ ಒಪ್ಪಿರಲಿಲ್ಲ. ಬಳಿಕ, ಉಕ್ರೇನ್ ಒಪ್ಪಿದಾಗ ರಷ್ಯಾ ಒಪ್ಪಿರಲಿಲ್ಲ. ಈಗ ಎರಡೂ ದೇಶಗಳ ಪ್ರತಿನಿಧಿಗಳನ್ನು ಒಂದೆಡೆ ಕರೆತಂದು ಮಾತುಕತೆ ನಡೆಸಿದ್ದೇವೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!