ಉದಯವಾಹಿನಿ, ಭುವನೇಶ್ವರ: ಒಡಿಶಾ ರಾಜ್ಯಸಭಾ ಚುನಾವಣೆಯಲ್ಲಿ ಭಾರೀ ಹೈಡ್ರಾಮಾವೇ ನಡೆದಿದೆ. ಬಿಜು ಜನತಾದಳ ಮತ್ತು ಕಾಂಗ್ರೆಸ್‌ನ ಜಂಟಿ ಅಭ್ಯರ್ಥಿಯ ವಿರುದ್ಧ ಸುಮಾರು 10 ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಬಿಜೆಪಿ ಬೆಂಬಲಿತ ಉದ್ಯಮಿ ದಿಲ್ಲಿಪ್ ರೇ ಅವರನ್ನು ಬೆಂಬಲಿಸಿದವರಲ್ಲಿ ಐದು ಬಿಜೆಡಿ ಮತ್ತು 5 ಕಾಂಗ್ರೆಸ್ ಶಾಸಕರು ಸೇರಿದ್ದಾರೆ ಎಂದು ವರದಿಯಾಗಿದೆ.
ಇಂದು ನಾಲ್ಕು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಒಡಿಶಾದ ಶಾಸಕರು ಮತದಾನ ಮಾಡಿದ್ದಾರೆ. ಈ ಪೈಕಿ ನಾಲ್ಕನೇ ಸ್ಥಾನಕ್ಕೆ ಯಾವುದೇ ಪಕ್ಷದ ಬಳಿ ಸ್ಪಷ್ಟ ಸಂಖ್ಯಾ ಬಲ ಇಲ್ಲದ ಕಾರಣ ಒಡಿಶಾ ರಾಜಕೀಯದಲ್ಲಿ ಮೊದಲೇ ಅಡ್ಡ ಮತದಾನದ ಭೀತಿ ಎದುರಾಗಿತ್ತು.
ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಬಿಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಖ್ಯಾತ ಮೂತ್ರಪಿಂಡ ತಜ್ಞ ದತ್ತೇಶ್ವರ ಹೋಟಾ ಅವರನ್ನು ಕಣಕ್ಕಿಳಿಸಿತ್ತು. ಪ್ರಖ್ಯಾತ ಹೋಟೆಲ್ ಉದ್ಯಮಿ ಮತ್ತು ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರು ಬಿಜೆಪಿ (BJP) ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಡಿ ಶಾಸಕ ದೇಬಿ ರಂಜನ್ ತ್ರಿಪಾಠಿ ಅವರು ರೇ ಅವರಿಗೆ ಮತ ಹಾಕಿದ್ದಾರೆಂದು ಒಪ್ಪಿಕೊಂಡಿದ್ದಾರೆ. ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಪರಂಪರೆಯಂತೆ ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಚುನಾವಣೆಗೆ ಬಿಜೆಡಿ ಮತ್ತು ಕಾಂಗ್ರೆಸ್ ಅನೈತಿಕ ಮೈತ್ರಿ ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
