ಉದಯವಾಹಿನಿ, ಬೀದರ್: ತಾಲೂಕಿನ ದುಮ್ಮಸಾಪೂರ್ ಗ್ರಾಮದ ಬಳಿಯಿರುವ ಚಿಟ್ಟಾ ಅರಣ್ಯ ಪ್ರದೇಶದ ಬಳಿ ಅಗ್ನಿ ಅವಘಡ ಸಂಭವಿಸಿದ್ದು, ಸತತ ಒಂದು ಗಂಟೆಯಿಂದಲೂ ಹೊತ್ತಿ ಉರಿಯುತ್ತಿದೆ. ಅಗ್ನಿ ಅವಘಡದಿಂದ ಅರಣ್ಯ ಪ್ರದೇಶದಲ್ಲಿರುವ ಪಕ್ಷಿಗಳಿಗೆ ಕಂಟಕ ಎದುರಾಗಿದೆ. ಬೆಂಕಿ ಕೆನ್ನಾಲಿಗೆ ವ್ಯಾಪಿಸುತ್ತಿದ್ದಂತೆ ಗುಂಪುಗೂಡಿದ್ದ ಪಕ್ಷಿಗಳೆಲ್ಲವು ಕಾಡಿನಿಂದ ಚದುರಿಹೋಗುತ್ತಿವೆ. ಜೊತೆಗೆ ಹೆಚ್ಚಾಗಿರುವ ಕೃಷ್ಣಮೃಗಗಳಿಗೂ ಆತಂಕ ತಂದೊಡ್ಡುವ ಸಾಧ್ಯತೆಯಿದೆ.
ಸ್ಥಳೀಯರು ಅಗ್ನಿ ಶಾಮಕದಳದ ಸಿಬ್ಬಂದಿಗೆ ಮತ್ತು ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ್ರೂ ಸೂಕ್ತ ಸಮಯಕ್ಕೆ ಬಾರದೇ ನಿರ್ಲಕ್ಷ್ಯವಹಿಸಿದ್ದಾರೆ. ಪಕ್ಕದಲ್ಲೇ ವಿಮಾನ ನಿಲ್ದಾಣವಿದ್ರು ಅಧಿಕಾರಿಗಳ ಮಹಾ ನಿರ್ಲಕ್ಷ್ಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವರು ಇದು ಕಿಡಿಗೇಡಿಗಳ ಕೃತ್ಯವೂ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಅರಣ್ಯ ಇಲಾಖೆ ಪರಿಸರ ಸಂರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಾ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯ ಮಾಡುತ್ತಿದೆ. ಆದರೆ, ಮತ್ತೊಂದೆಡೆ ಕಿಡಿಗೇಡಿಗಳು ಕಾಡಿನಲ್ಲಿ ಒಣಗಿದ ತಪ್ಪಲಿಗೆ ಬೆಂಕಿ ಹಚ್ಚಿ ಮರ ಗಿಡಗಳನ್ನು ಸುಟ್ಟು ವಿಕೃತ ಪ್ರವೃತ್ತಿ ಮುಂದುವರೆಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
