ಉದಯವಾಹಿನಿ : ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವರು ರಕ್ತದಲ್ಲಿರುವ ಶುಗರ್ ಲೆವಲ್ ನಿಯಂತ್ರಿಸಲು ವಿವಿಧ ಕ್ರಮಗಳಿಗೆ ಮುಂದಾಗುತ್ತಾರೆ. ಕಾಲಕಾಲಕ್ಕೆ ಶುಗರ್ ಲೆವಲ್ ನಿಯಂತ್ರಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರಲ್ಲಿ ಉತ್ತಮ ಆಹಾರ ಕ್ರಮ ಪ್ರಮುಖ ಪಾತ್ರ ವಹಿಸುತ್ತದೆ.ಕೆಲವು ಭಾರತೀಯ ಆಹಾರಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಿಸಲು ಹಾಗೂ ಇನ್ಸುಲಿನ್ ಮಟ್ಟ ಸುಧಾರಣೆಗೆ ನೈಸರ್ಗಿಕ ಸಂಯುಕ್ತಗಳು ಸಹಾಯ ಮಾಡುತ್ತವೆ. ಇಂತಹ ಆಹಾರವನ್ನು ಸೇವಿಸುವುದರಿಂದ ನೈಸರ್ಗಿಕವಾಗಿ ಶುಗರ್ ನಿಯಂತ್ರಿಸಬಹುದು. ಆರೋಗ್ಯ ತಜ್ಞರು ಸೂಚಿಸುವಂತಹ ಆಹಾರ ಕ್ರಮಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ದೇಹವು ಸಕ್ಕರೆಯನ್ನು ಉತ್ತಮವಾಗಿ ಬಳಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಶುಗರ್ ಲೆವಲ್ ಸಮತೋಲನಗೊಳಿಸುತ್ತದೆ. ಪಾಲಕ್ ಸೊಪ್ಪು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಹೆಚ್ಚಿನ ಫೈಬರ್, ಸಮೃದ್ಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ದೇಹ ಸಕ್ಕರೆಯನ್ನು ಹೆಚ್ಚು ನಿಧಾನವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಸಹ ಸುಧಾರಿಸುತ್ತದೆ. ಉರಿಯೂತ ಕಡಿಮೆ ಮಾಡುತ್ತದೆ. ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸುತ್ತದೆ, ಚಯಾಪಚಯ ಆರೋಗ್ಯ ಸುಧಾರಿಸುತ್ತದೆ. ಪಾಲಕ್ ಸೊಪ್ಪಿನಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್‌ಗಳು ಹಾಗೂ ಆಲ್ಫಾ ಲಿಪೊಯಿಕ್ ಆಮ್ಲ ಮಧುಮೇಹ ಇರುವವರಿಗೆ ಒಳ್ಳೆಯದು.
ಹಾಗಲಕಾಯಿ: ಹಾಗಲಕಾಯಿಯ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ತುಂಬಾ ಸಹಾಯ ಮಾಡುತ್ತದೆ. ಇದರಲ್ಲಿರುವ ಪಾಲಿಪೆಪ್ಟೈಡ್ ಪಿ, ಚಾರಂಟಿನ್‌ನಂತಹ ಪೋಷಕಾಂಶಗಳು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವುದನ್ನು ತಡೆಯುತ್ತವೆ. ಹಾಗಲಕಾಯಿಲ್ಲಿರುವ ಫೈಬರ್ ಶಗುರ್ ಅನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇವುಗಳನ್ನು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವುದು ಒಳ್ಳೆಯದು. ಹಾಗಲಕಾಯಿಯ ಗುಣಲಕ್ಷಣಗಳು ನೈಸರ್ಗಿಕ ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುತ್ತವೆ. ಹೆಚ್ಚಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ.
ತೊಂಡೆಕಾಯಿ: ನಿಮ್ಮ ಆಹಾರ ಕ್ರಮದಲ್ಲಿ ತೊಂಡೆಕಾಯಿಯನ್ನು ಸೇರಿಸಿಕೊಳ್ಳುವುದರಿಂದ ಊಟದ ನಂತರ ಹೆಚ್ಚಾಗುವ ಸಕ್ಕರೆ ಮಟ್ಟವನ್ನೂ ಸಹ ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸುತ್ತವೆ. ಇವು ಇನ್ಸುಲಿನ್ ಅನ್ನು ಉತ್ತಮವಾಗಿ ಕೆಲಸ ಮಾಡಲು ತುಂಬಾ ಸಹಾಯ ಮಾಡುತ್ತವೆ. ನಿಮ್ಮ ಡಯಟ್ನಲ್ಲಿ ತೊಂಡೆಕಾಯಿಗಳನ್ನು ಸೇರಿಸಿಕೊಳ್ಳುವುದು ಉತ್ತಮ.
ಮೆಂತ್ಯ ಸೊಪ್ಪು: ಮೆಂತ್ಯ ಸೊಪ್ಪು ಹಲವು ಪೋಷಕಾಂಶಗಳು ಮೂಲವಾಗಿದೆ. ಮೆಂತ್ಯ ಸೊಪ್ಪು ಸೇವಿಸುವುದರಿಂದ ಸಕ್ಕರೆ ಹೀರಿಕೊಳ್ಳುವಿಕೆಯನ್ನು ತುಂಬಾ ನಿಧಾನವಾಗುತ್ತದೆ. ಪ್ರಮುಖವಾಗಿ ಊಟದ ಬಳಿಕ ಶುಗರ್ ಲೆವಲ್ ಇದ್ದಕ್ಕಿದ್ದಂತೆ ಹೆಚ್ಚಾಗುವುದಿಲ್ಲ. ಮೆಂತ್ಯ ಸೊಪ್ಪನ್ನು ತರಕಾರಿಗಳಲ್ಲಿ, ಬೇಳೆಗಳಲ್ಲಿ, ಸಲಾಡ್‌ಗಳಲ್ಲಿ ಯಾವುದೇ ರೀತಿಯಲ್ಲಿ ಸೇವನೆ ಮಾಡಬಹುದು. ಈ ಸೊಪ್ಪನ್ನು ಹೇಗೆ ಸೇವಿಸಿದರೂ ಸಕ್ಕರೆ ಮಟ್ಟವು ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ದೇಹದ ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
