ಉದಯವಾಹಿನಿ : ದಟ್ಟವಾದ, ರೇಷ್ಮೆಯಂತಹ ಹಾಗೂ ಹೊಳೆಯುವ ಕೂದಲುಗಳನ್ನು ಹೆಣ್ಣು ಮಕ್ಕಳು ಬಯಸುತ್ತಾರೆ. ಆದರೆ, ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಮಾಲಿನ್ಯದಿಂದಾಗಿ ಕೂದಲು ಉದುರುವಿಕೆ ಹಾಗೂ ಸ್ಲಿಟ್ ಕೂದಲಿನ ತುದಿಗಳಂತಹ ಸಮಸ್ಯೆಗಳು ಎದುರಾಗುತ್ತಿವೆ. ಇದರಿಂದ ಕೆಲವರು ತೀವ್ರ ಮುಜುಗರ ಅನುಭವಿಸುತ್ತಿರುತ್ತಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಸೌಂದರ್ಯ ತಜ್ಞರು, ಕೂದಲಿನ ಬೆಳವಣಿಗೆ ಹೆಚ್ಚಿಸಲು ಮನೆಮದ್ದುಗಳನ್ನು ಸೂಚಿಸಿದ್ದಾರೆ.
ಮೊಟ್ಟೆಯ ಬಿಳಿಭಾಗ: ಮೊಟ್ಟೆಯ ಬಿಳಿಭಾಗವನ್ನು ಕೂದಲಿಗೆ ಹಚ್ಚಿ 30 ನಿಮಿಷ ಒಣಗಲು ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ತಲೆ ತೊಳೆಯಿರಿ. ವಾರಕ್ಕೆ ಒಂದು ಇಲ್ಲವೇ ಎರಡು ಬಾರಿ ಹೀಗೆ ಮಾಡುವುದರಿಂದ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀವು ಬಯಸಿದರೆ, ಮೊಟ್ಟೆಯ ಬಿಳಿಭಾಗದ ಜತೆಗೆ ಸ್ವಲ್ಪ ಎಣ್ಣೆ ಮತ್ತು ಸ್ವಲ್ಪ ನೀರನ್ನು ಸೇರಿಸಬಹುದು. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯದವರೆಗೆ ನಿಧಾನವಾಗಿ ಮಸಾಜ್ ಮಾಡಲು ಸೂಚಿಸಲಾಗುತ್ತದೆ. ಇದರಿಂದ ಉತ್ತಮ ಫಲಿತಾಂಶ ಲಭಿಸುತ್ತದೆ.
ಮೆಂತ್ಯ ಬೀಜ: ಒಂದು ಹಿಡಿ ಮೆಂತ್ಯ ಬೀಜವನ್ನು ತೆಗೆದುಕೊಂಡು ಅದನ್ನು 10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ, ಅವುಗಳನ್ನು ಮಿಕ್ಸರ್‌ನಲ್ಲಿ ಬೆರೆಸಿ ಮೃದುಗೊಳಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 30ರಿಂದ 40 ನಿಮಿಷ ಒಣಗಲು ಬಿಡಿ. ನಂತರ ನಿಮ್ಮ ಕೂದಲನ್ನು ಉಗುರು ಬೆಚ್ಚಗಿನ ನೀರು ಹಾಗೂ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
ಇದೀಗ ನೀವು ಬಯಸಿದರೆ ಮೆಂತ್ಯ ಮಿಶ್ರಣಕ್ಕೆ ಸ್ವಲ್ಪ ತೆಂಗಿನ ಹಾಲನ್ನು ಸೇರಿಸಿ ಕೂದಲಿಗೆ ಹಚ್ಚಬಹುದು. ತಾಜಾ ಮೆಂತ್ಯ ಬೀಜಗಳು ತುಂಬಾ ಪರಿಣಾಮಕಾರಿ ಹಾಗೂ ಶಕ್ತಿಯುತವಾಗಿವೆ. ಇವು ಕೂದಲು ಉದುರುವಿಕೆ ಹಾಗೂ ತಲೆಹೊಟ್ಟು ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತವೆ ಎಂದು ಇಂಟರ್ನ್ಯಾಷನಲ್ ಜರ್ನಲ್ ಆಫ್ ನರ್ಸಿಂಗ್ ಎಜುಕೇಶನ್ ಆ್ಯಂಡ್ ರಿಸರ್ಚ್ ತಿಳಿಸುತ್ತದೆ. ಮೆಂತ್ಯ ಬೀಜಗಳು ಕೂದಲಿನ ಬೆಳವಣಿಗೆಗೆ ಸಹಾಯಕ ಎಂದು ಸಂಶೋಧನೆ ಹೇಳುತ್ತದೆ.
ಆಮ್ಲಾ & ಸೀಗೆ ಕಾಯಿ: ಕೂದಲು ತೊಳೆಯಲು ರಾಸಾಯನಿಕ ಶಾಂಪೂಗಳ ಬದಲಿಗೆ ನೈಸರ್ಗಿಕವಾಗಿ ತಯಾರಿಸಿದ ಆಮ್ಲಾ ಮತ್ತು ಸೀಗೆ ಕಾಯಿ ಪುಡಿ ಬಳಸುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಇವು ಕೂದಲಿನ ಬೆಳವಣಿಗೆಗೆ ಅಗತ್ಯ ಪೋಷಣೆ ಒದಗಿಸಿ, ಕೂದಲನ್ನು ಬಲಪಡಿಸುತ್ತವೆ.
ಈರುಳ್ಳಿ ರಸ: ಈರುಳ್ಳಿಯಲ್ಲಿರುವ ಸಲ್ಫರ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದಕ್ಕಾಗಿ ಈರುಳ್ಳಿ ರಸದೊಂದಿಗೆ ಕೂದಲನ್ನು ನಿಧಾನವಾಗಿ ಮಸಾಜ್ ಮಾಡಬೇಕಾಗುತ್ತದೆ. ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕೂದಲನ್ನು ಆರೋಗ್ಯಕರವಾಗಿಡುವುದಲ್ಲದೆ, ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ ಎಂದು ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಪ್ರಕಟವಾದ ಸಂಶೋಧನೆ ತಿಳಿಸುತ್ತದೆ.
