ಉದಯವಾಹಿನಿ , ಮಡಿಕೇರಿ: 2018 ರಿಂದ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಗಳು ನಡೆಯುತ್ತಲೇ ಇವೆ. ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ಪರಿಸರದ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ಭೂಗರ್ಭ ಶಾಸ್ತ್ರಜ್ಞರು ಕಾಲಕಾಲಕ್ಕೆ ವರದಿ ನೀಡುತ್ತಲೇ ಬಂದಿದ್ದರೂ, ಕೆಲವರ ದುರಾಸೆಯಿಂದ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ.
ಹೌದು. ಕೆಲ ದಿನಗಳಿಂದ ವಿರಾಜಪೇಟೆ ತಾಲ್ಲೂಕಿನ ಅಂಬಟ್ಟಿ ಬೆಟ್ಟದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಅಟ್ಟಹಾಸ ಮಿತಿ ಮೀರಿದೆ. ರೆಸಾರ್ಟ್ ಹಾಗೂ ವಿಲ್ಲಾಗಳ ನಿರ್ಮಾಣಕ್ಕಾಗಿ ಯಾವುದೇ ಇಲಾಖೆ ಅನುಮತಿ ಪಡೆಯದೇ ಬೃಹತ್ ಬೆಟ್ಟವನ್ನ ಬಗೆದು, ಬೆಟ್ಟದ ಬುಡದಲ್ಲೇ ಡೈನಮೈಟ್ ಸ್ಫೋಟಿಸಲಾಗಿತ್ತು. ಬೆಟ್ಟದ ಮೇಲಿನಿಂದ ಹರಿಯುತ್ತಿದ್ದ ನೀರಿನ ಮೂಲವನ್ನೇ ಬಂದ್ ಮಾಡಿರುವ ಆರೋಪ ಕೇಳಿಬಂದಿತ್ತು. ಇದರಿಂದ ಮಳೆಗಾಲದಲ್ಲಿ ಭಾರೀ ಭೂ ಕುಸಿತ ಸಂಭವಿಸುವ ಆತಂಕ ಕೂಡ ಎದುರಾಗಿದ್ದು, ಅವೈಜ್ಞಾನಿಕ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು.
