ಉದಯವಾಹಿನಿ, ಬಿಗ್‌ ಬಾಸ್‌ ಮನೆಗೆ ವಿಶೇಷ ಅತಿಥಿಯೊಬ್ಬರ ಎಂಟ್ರಿಯಾಗಿದೆ. ಕ್ರೇಜಿಸ್ಟಾರ್‌ ರವಿಚಂದ್ರನ್‌ ದೊಡ್ಮನೆಗೆ ಬಂದಿದ್ದು, ಕಂಟೆಸ್ಟೆಂಟ್‌ಗಳ ಜೊತೆ ತಮ್ಮ ಲವ್‌ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಸದಾ ಟಾಸ್ಕ್‌, ಜಗಳ, ಕೂಗಾಟದಿಂದ ಕೂಡಿದ್ದ ಬಿಗ್‌ ಮನೆಯಲ್ಲಿ ಕ್ರೇಜಿಸ್ಟಾರ್‌ ಪ್ರೇಮಲೋಕ ತೆರೆದಿಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಪ್ರೇಮಲೋಕ ತೆರೆದಿಟ್ಟವರು ಕ್ರೇಜಿಸ್ಟಾರ್‌ ರವಿಚಂದ್ರನ್.‌ ಅವರ ಬಹುಪಾಲು ಸಿನಿಮಾಗಳು ಪ್ರೀತಿ-ಪ್ರೇಮ-ಪ್ರಣಯ ಕುರಿತಾಗಿವೆ. ರವಿಚಂದ್ರನ್‌ ರಿಯಲ್‌ ಲೈಫ್‌ನ ಲವ್‌ ಹೇಗಿತ್ತು ಎಂಬ ಕುತೂಹಲ ಯಾರಿಗಾದರು ಇದ್ದೇ ಇರುತ್ತೆ. ಅದನ್ನು ಕೇಳುವ ಸೌಭಾಗ್ಯ ಬಿಗ್‌ ಬಾಸ್‌ ಸ್ಪರ್ಧಿಗಳದ್ದಾಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲರನ್ನೂ ಕೂರಿಸಿಕೊಂಡು ರವಿಚಂದ್ರನ್‌ ತಮ್ಮ ಕಾಲೇಜು ದಿನಗಳ ಮೊದಲ ಲವ್‌ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ‘ನಾನಿನ್ನ ಮರೆಯಲಾರೆ ಸಿನಿಮಾದಲ್ಲಿ ರಾಜ್‌ಕುಮಾರ್‌ ಅವರು ಓಡಿಸಿದ್ದ ಬೈಕ್‌ ತಗೊಂಡು ಕಾಲೇಜಿಗೆ ಎಂಟ್ರಿಯಾದೆ. ಆಗ ಅಲ್ಲೇ 10-15 ಹುಡುಗಿಯರು ನಿಂತಿದ್ದರು. ನನ್ನ ಮೋಟರ್‌ಬೈಕ್‌ ಸೌಂಡ್‌ಗೆ ಒಂದು ಹುಡುಗಿ ತಿರುಗಿ ನೋಡ್ತಾಳೆ. ಇವತ್ತಿನವರೆಗೂ ಆ ಕ್ಷಣನ ಮರೆತಿಲ್ಲ ನಾನು. ಫಸ್ಟ್‌ ಪ್ರೀತಿಸಿದ ಹುಡುಗಿ ಅವಳು’ ಅಂತ ರವಿಚಂದ್ರನ್‌ ಹೇಳಿಕೊಳ್ತಾರೆ.

‘ಅವಳಿಗೆ ಐ ಲವ್‌ ಯು ಅಂತ ಹೇಳೋಕೆ ಒಂದು ವರ್ಷ ತಗೊಂಡೆ. ಕಣ್ಣಲ್ಲೇ ಇಬ್ಬರೂ ಒಂದು ವರ್ಷ ಪ್ರೀತಿ ಮಾಡಿದ್ದೀವಿ. ಒಂದು ದಿನ ಅವಳನ್ನು ಮಾತಾಡಿಸಲೇಬೇಕು ಅಂತ ಕಾರು ತಗೊಂಡು ಕಾಲೇಜ್‌ಗೆ ಹೋಗಿದ್ದೆ. ನಡೆದುಕೊಂಡು ಹೋಗ್ತಿದ್ದ ಅವಳ ಬಳಿ ಕಾರು ನಿಲ್ಲಿಸಿ, ನಿಮಗೆ ಡ್ರಾಪ್‌ ಕೊಡ್ಲಾ ಅಂತ ಕೇಳ್ತೀನಿ. ಆದರೆ, ಅವಳು ನೋ ಥ್ಯಾಂಕ್ಸ್‌ ಅಂತ ಹೇಳಿ ಹೊರಟು ಹೋಗ್ತಾಳೆ. ಅಷ್ಟೇ.. ನೆಕ್ಸ್ಟ್‌ಯಿಂದ ಕಾಲೇಜ್‌ಗೆ ಬಂದಿಲ್ಲ ನಾನು. ಒಂದು ವಾರ ನಾನು ಕಾಲೇಜ್‌ಗೆ ಹೋಗಲ್ಲ. ಒಂದು ದಿನ ಲ್ಯಾಂಡ್‌ಲೈನ್‌ಗೆ ಕಾಲ್‌ ಬರುತ್ತೆ. ಮನೆ ನಂಬರ್‌ ಹೇಗೋ ತಿಳ್ಕೊಂಡು ಅವಳೇ ಕಾಲ್‌ ಮಾಡಿದ್ದಳು. ಅಲ್ಲಿಂದ ಇಬ್ಬರು ಮಾತನಾಡಲು ಶುರು ಮಾಡ್ತೀವಿ’ ಅಂತ ರವಿಚಂದ್ರನ್‌ ತಮ್ಮ ಪ್ರೇಮ ಪ್ರಸಂಗ ತೆರೆದಿಟ್ಟಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!