ಉದಯವಾಹಿನಿ , ವಾಷಿಂಗ್ಟನ್: ‘ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಶಮನಗೊಳಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಪಾತ್ರವಹಿಸಿದ್ದಾರೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ. ವರ್ಷಾಂತ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವರ್ಷ ಭಾರತ-ಪಾಕಿಸ್ತಾನ ಸೇರಿದಂತೆ ಹಲವು ದೇಶಗ ನಡುವಣ ಸಂಘರ್ಷಗಳನ್ನು ನಾವು ಪರಿಹರಿಸಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಅದರಂತೆಯೇ ಅವರು ವಿಶ್ವದಾದ್ಯಂತ ಶಾಂತಿ ನೆಲೆಸುವಂತೆ ಮಾಡುವುದನ್ನೇ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
‘ನಮ್ಮ ದೈನಂದಿನ ಜೀವನದಲ್ಲಿ ಕೇಂದ್ರೀಯವಾಗಿಲ್ಲದ ಸಂಘರ್ಷಗಳು ಸೇರಿದಂತೆ ಅಮೆರಿಕವು ಪ್ರಪಂಚದಾದ್ಯಂತ ನಡೆಯುತ್ತಿರುವ ಸಂಘರ್ಷಗಳನ್ನು ಶಮನ ಮಾಡುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದೆ’ ಎಂದು ರುಬಿಯೊ ಹೇಳಿದರು.
“ಟ್ರಂಪ್‌ ಅವರು ಶಾಂತಿಪ್ರಿಯರಾಗುವುದನ್ನು ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ. ಆದ್ದರಿಂದ ರಷ್ಯಾ-ಉಕ್ರೇನ್, ಭಾರತ-ಪಾಕಿಸ್ತಾನ, ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷವನ್ನು ಶಮನ ಮಾಡುವ ನಿಟ್ಟಿನಲ್ಲಿ ನಾವು ತೊಡಗಿಸಿಕೊಂಡಿರುವುದನ್ನು ನೀವೆಲ್ಲಾ ನೋಡಿದ್ದೀರಿ. ಇದು ನಿರಂತರ ಸವಾಲಾಗಿದೆ’ ಎಂದಿದ್ದಾರೆ. ‘ಅಮೆರಿಕ ಪರಿಹರಿಸಿದ ಕೆಲವು ಸಂಘರ್ಷಗಳು ಹಲವು ವರ್ಷಗಳ ಹಿಂದಿನ ಆಳವಾದ ಬೇರುಗಳನ್ನು ಹೊಂದಿವೆ.
ಆದರೂ ನಾವು ಸಂಘರ್ಷಗಳನ್ನು ಪರಿಹರಿಸಲು ಸಿದ್ಧರಿದ್ದೇವೆ. ಈ ವಿಚಾರದಲ್ಲಿ ಬಹುಶಃ ಬೇರೆ ರಾಷ್ಟ್ರಗಳಿಗೆ ಸಾಧ್ಯವಾಗದೆ ಇರುವುದರಿಂದ ನಮ್ಮನ್ನು ಅನಿವಾರ್ಯವೆಂದು ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತ ಶಾಂತಿಯನ್ನು ನೆಲೆಸುವಲ್ಲಿ ಟ್ರಂಪ್‌ ಅವರು ಬಹಳ ಹೆಮ್ಮೆಪಡುವ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಬಹಳಷ್ಟು ಪ್ರಶಂಸೆಗೆ ಅರ್ಹರಾಗಿದ್ದಾರೆ’ ಎಂದೂ ರುಬಿಯೊ ವಿವರಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಅವರು ಇದುವರೆಗೆ 70 ಬಾರಿ ಪುನರಾವರ್ತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!