ಉದಯವಾಹಿನಿ,
: ಮಣಿಪುರ : ವ ಹಿಂಸಾಚಾರವನ್ನು ಶೀಘ್ರ ಕೊನೆಗೊಳಿಸಿ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ವೇಯ್ಟ್‌ಲಿಫ್ಟರ್ ಮೀರಾಬಾಯಿ ಚಾನು ಮನವಿ ಮಾಡಿದ್ದಾರೆ.
ಈ ಕುರಿತು ವಿಡಿಯೊ ಸಂದೇಶ ಹಂಚಿಕೊಂಡಿರುವ ಮೀರಾಬಾಯಿ ಚಾನು, ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಶಾಂತಿ ನೆಲೆಸಿಲ್ಲ. ಹಿಂಸಾಚಾರದಿಂದಾಗಿ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಅಧ್ಯಯನಕ್ಕೆ
ತೊಂದರೆ ಉಂಟಾಗಿದೆ. ಅನೇಕ ಮಂದಿ ಮೃತಪಟ್ಟಿದ್ದು, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸಲು ಮತ್ತು ಶಾಂತಿ ನೆಲೆಸಲು ಪ್ರಧಾನಿ ಹಾಗೂ ಗೃಹ ಸಚಿವರಿಗೆ ಮನವಿ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಅಮೆರಿಕದಲ್ಲಿರುವ ಚಾನು, ಮುಂಬರುವ ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಆದರೂ ತಮ್ಮ ಹುಟ್ಟೂರಾದ ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಅತೀವ ನೋವು ಉಂಟಾಗಿದೆ ಎಂದು ಗಮನ ಸೆಳೆದಿದ್ದಾರೆ.
ಮಣಿಪುರದಲ್ಲಿ ಕಳೆದ ಮೇ ೩ರಿಂದ ಎರಡು ಸಮುದಾಯಗಳಾದ ಮೈಥೇಯಿ ಮತ್ತು ಕುಕಿಗಳ ನಡುವೆ ಜನಾಂಗೀಯ ಘರ್ಷಣೆ ನಡೆಯುತ್ತಿದೆ. ೧೫೦ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈಥೇಯಿ ಸಮುದಾಯ ಬೇಡಿಕೆಯಿಟ್ಟು ಬೆಟ್ಟದ ಜಿಲ್ಲೆಗಳಲ್ಲಿ ’ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿತ್ತು.
ನಂತರ ಶುರುವಾದ ಗಲಭೆ ಇನ್ನೂ ತಣ್ಣಗಾಗಿಲ್ಲ. ಮಣಿಪುರದಲ್ಲಿ ಸುಮಾರು ಶೇ ೫೩ ರಷ್ಟಿರುವ ಮೈಥೇಯಿ ಜನರು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಇತರೆ ಬುಡಕಟ್ಟು ಜನಾಂಗದವರು ಶೇ ೪೦ ರಷ್ಟಿದ್ದು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.
ಈ ಘಟನಾವಳಿಗಳು ರಾಜಕೀಯ ಪಕ್ಷಗಳ ಆರೋಪ- ಪ್ರತ್ಯಾರೋಪಗಳಿಗೂ ಕಾರಣವಾಗಿದೆ.
