ಉದಯವಾಹಿನಿ, ಕಲಬುರಗಿ:  ನಳದ ನೀರು ತುಂಬುವ ವಿಷಯಕ್ಕೆ ಇಬ್ಬರು ಮಹಿಳೆಯರ ನಡುವೆ ನಡೆದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನಗರದ ಬ್ರಹ್ಮಪುರ ಬಡಾವಣೆಯ ವಡ್ಡರಗಲ್ಲಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಂಗಲಾ ಜಾಧವ ಮತ್ತು ಶ್ರೀದೇವಿ ತಾಮಕುಮ್ ಎಂಬುವವರ ನಡುವೆ ಜಗಳ ನಡೆದಿದ್ದು, ಶ್ರೀದೇವಿ ಅವರು ನಳದ ನೀರಿನ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈಯ್ದು ಕೂದಲು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಇನ್ನೊಮ್ಮೆ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸುಮಂಗಲಾ ದೂರಿನಲ್ಲಿ ತಿಳಿಸಿದ್ದಾರೆ.  ವಡ್ಡರಗಲ್ಲಿಯ ಸುಮಂಗಲಾ ತಂದೆ ಸಾಯಿಬಣ್ಣಾ ಜಾಧವ (36) ಎಂಬುವವರ ಮನೆಯ ಎದರುಗಡೆ ಸರ್ಕಾರದ ವತಿಯಿಂದ ನೀರಿನ ನಳ ಕೂಡಿಸಲಾಗಿದ್ದು, ವಾರಕ್ಕೆ ಎರಡು ಬಾರಿ ನೀರು ಬರುತ್ತವೆ. ಜು.14 ರಂದು ಬೆಳಿಗ್ಗೆ 8.30ಕ್ಕೆ ಸುಮಂಗಲಾ ಅವರು ಮನೆಯ ಎದರುಗಡೆ ಇರುವ ನಳದ ನೀರು ತುಂಬುವಾಗ ಶ್ರೀದೇವಿ ಯಲ್ಲಪ್ಪ ತಾಮಕುಮ್ ಅವರು ನಳದ ನೀರಿನ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈಯ್ದಿದ್ದಾರೆ. ನನ್ನ ನಂತರ ನೀನು ನೀರು ತೆಗೆದುಕೊ ಇಲ್ಲದಿದ್ದರೆ ನಿನ್ನ ಗ್ರಹಚಾರ ಬಿಡಿಸುತ್ತೇನೆ ಎಂದು ಸುಮಂಗಲಾ ಇಟ್ಟ ಕೊಡವನ್ನು ಶ್ರೀದೇವಿ ತೆಗೆದು ಬಿಸಾಕಿದ್ದಾರೆ. ಆಗ ಸುಮಂಗಲಾ ಕೊಡ ತಂದು ನೀರು ತುಂಬಿಕೊಳ್ಳಲು ಹೋದಾಗ ಶ್ರೀದೇವಿ ಅವರು ಕೂದಲು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ ಹೊಡೆದಿದ್ದಾರೆ. ಅಲ್ಲದೆ ಅಲ್ಲೇ ಬಿದ್ದಿದ್ದ ಇಟ್ಟಂಗಿಯಿಂದ ತಲೆಗೆ ಹೊಡೆದು ಗುಪ್ತ ಗಾಯ ಮಾಡಿದ್ದಾರೆ ಎಂದು ಸುಮಂಗಲಾ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಶೋಕನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!