ಉದಯವಾಹಿನಿ, ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ ಕಳ್ಳತನ ಹಾಗೂ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಪ್ರಕರಣಗಳಲ್ಲಿ ಹೊರ ರಾಜ್ಯಗಳಿಂದ ವಲಸೆ ಬಂದಿರುವವರು ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಇದರಿಂದ ಅನ್ಯ ರಾಜ್ಯದವರನ್ನು ಬಾಡಿಗೆ ಮನೆಯಿಂದ ಹೊರಹಾಕಲು ಬೇಲೂರಿನ ಅರೇಹಳ್ಳಿ ಗ್ರಾಮ ಪಂಚಾಯತಿ ನೋಟಿಸ್ ನೀಡಿದೆ.
ಹೆಚ್ಚು ಬಾಡಿಗೆಗೆ ಹೊರ ರಾಜ್ಯಗಳಿಂದ ಬಂದಿರುವವರಿಗೆ ಮನೆ ನೀಡಲಾಗುತ್ತಿದೆ. ತಾಲೂಕಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಲ್ಲಿ ಅನ್ಯ ರಾಜ್ಯದ ಜನ ಭಾಗಿಯಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಸಾರ್ವಜನಿಕರು ಹಾಗೂ ಕಾಫಿ ಬೆಳೆಗಾರರಿಂದ ವ್ಯಾಪಕ ದೂರು ಬಂದ ಕಾರಣ ಅರೇಹಳ್ಳಿ ಗ್ರಾಮ ಪಂಚಾಯತಿ ಈ ನಿರ್ಧಾರ ಕೈಗೊಂಡಿದೆ. ನೋಟಿಸ್ ತಲುಪಿದ 10 ದಿನಗಳೊಳಗೆ ಅನ್ಯ ರಾಜ್ಯದ ವಲಸೆ ಕಾರ್ಮಿಕರನ್ನು ಮನೆ ಖಾಲಿ ಮಾಡಿಸಬೇಕು. ಕಳ್ಳತನ, ದರೋಡೆ, ಅಪರಾಧ ಪ್ರಕರಣಗಳು ನಡೆದರೆ ಮನೆ ಮಾಲೀಕರೆ ನೇರ ಹೊಣೆ ಎಂದು ಗ್ರಾಮ ಪಂಚಾಯತಿ ಎಚ್ಚರಿಕೆ ನೀಡಿದೆ.
