ಉದಯವಾಹಿನಿ, ಮಡಿಕೇರಿ: ಗೋವುಗಳನ್ನು ಸಾಕಣೆಗಾಗಿ ಖರೀದಿಸಿ ಅಕ್ರಮವಾಗಿ ಕೇರಳದ ಕಸಾಯಿಕಾನೆಗೆ ಸಾಗಣೆ ಮಾಡಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳದ ಇನ್ನೂರು ತಳಿಪರಂಬಾ ನಿವಾಸಿ ಪಿ.ಪಿ.ಸಾಧಿಕ್ (38) ಮತ್ತು ಅಬ್ದುಲ್ ಅಹಮ್ಮದ್ ತಂಜಳ್ (34)ಬಂಧಿತ ಆರೋಪಿಗಳು. ಬಂಧಿತರು ತಳಿಪರಂಬಾದಿಂದ ಬಂದು ಪಿರಿಯಪಟ್ಟಣ ತಾಲೂಕಿನ ವಿವಿಧೆಡೆ ದನ ಕರುಗಳನ್ನು ಖರೀದಿಸಿ ನಡುರಾತ್ರಿ ಸಾಗಿಸುತ್ತಿದ್ದರು. ರಾಸುಗಳನ್ನು ತುಂಬಿಸಿಕೊಂಡು ಅನುಮಾನ ಬರದಂತೆ ಆಲೂಗಡ್ಡೆ ಮೂಟೆಗಳನ್ನು ತುಂಬಿಸಿದ್ದರು.
ಗೋವುಗಳನ್ನು ತುಂಬಿಸಿದ್ದ ಲಾರಿ ಹೊರಡುತ್ತಿದ್ದ ವಿಷಯ ತಿಳಿದ ಗೋರಕ್ಷಕರು ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದ ಬಳಿ ಕಾಯುತ್ತಿದ್ದರು. ಮುಂಜಾನೆ ಲಾರಿ ತಪಾಸಣೆ ಕೇಂದ್ರದ ಬಳಿ ಬರುತ್ತಿದ್ದಂತೆ ಲಾರಿ ಪರಿಶೀಲಿಸಿದ್ದಾರೆ. ಈ ವೇಳೆ 10ಕ್ಕು ಹೆಚ್ಚು ಗೋವುಗಳು ಪತ್ತೆಯಾಗಿವೆ. ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಲಾರಿ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
