ಉದಯವಾಹಿನಿ,ತಾಳಿಕೋಟಿ: ಪಟ್ಟಣದ ಪುರಸಭೆಯಲ್ಲಿ ಅವ್ಯವಸ್ಥೆ ಮಿತಿಮೀರಿ ಹೋಗಿದ್ದು, ‘ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಕೆಲಸಗಳನ್ನು ಮಾಡದೇ ವಿನಾಕರಣ ಸತಾಯಿಸುತ್ತಿದ್ದು ದುರಹಂಕಾರದ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಪುರಸಭೆ ಕಾರ್ಯಾಲಯದಲ್ಲಿ ನಡೆದಿದೆ.
ಘಟನೆಯ ವಿವರ: ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಅವರು ಸಾರ್ವಜನಿಕರ ಕುಂದುಕೊರತೆಗಳನ್ನು ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಇವರ ಗಮನಕ್ಕೆ ತರಲು ಪುರಸಭೆಗೆ ಆಗಮಿಸಿದಾಗ ಅವರೊಂದಿಗೆ ಸರಿಯಾಗಿ ಸ್ಪಂದಿಸದೆ ಇದ್ದಾಗ ವಾಗ್ವಾದ ನಡೆಯಿತು. ಅಲ್ಲಿಯೇ ಉಪಸ್ಥಿತರಿದ್ದ ಕೆಲವು ಸಾರ್ವಜನಿಕರು ಹಾಗೂ ಹಾಲಿ ಸದಸ್ಯರು ಮುಖ್ಯಾಧಿಕಾರಿಗಳ ಈ ದುರ್ವರ್ತನೆಯನ್ನು ಖಂಡಿಸಿದರು.
ಕರ್ನಾಟಕದಲ್ಲಿಯೇ ನಂ. ೧ ಇದ್ದ ಪುರಸಭೆಯ ಸ್ಥಿತಿ ಇಂದು ಎಲ್ಲಿಗೆ ತಂದು ನೀವು ನಿಲ್ಲಿಸಿದ್ದೀರಿ ಎಂದು ಮುಖ್ಯಾಧಿಕಾರಿ ಮೇಲೆ ಹರಿಹಾಯ್ದ ಸಾರ್ವಜನಿಕರು ಹಾಗೂ ಮುಖಂಡರು ಒಂದು ಉತಾರೆ ಪಡೆಯಲು ಕನಿಷ್ಟ ೫ ಸಾವಿರ ಲಂಚ ತೆಗೆದುಕೊಳ್ಳುತ್ತಿದೆಯಾದರೂ ತಿಂಗಳುಗಟ್ಟಲೆ ಅಲೆಯುವಂತೆ ಮಾಡಲಾಗುತ್ತದೆ. ಲೇಔಟ್ ಫೈಲ್‌ಗಳು ಕೆಲಸ ಆಗದೇ ಧೂಳುಹತ್ತಿವೆ. ಕಟ್ಟಡ ಅನುಮತಿಗೆ ತಿಂಗಳಗಟ್ಟಲೆ ತಿರುಗಬೇಕು ಎಂದು ಆಕ್ರೋಶ ಭರಿತರಾದ ಮಾಜಿ ಹಾಲಿ ಸದಸ್ಯರು ನೀವು ಸಾರ್ವಜನಿಕರ ರಕ್ತ ಹೀರುತ್ತಿದ್ದೀರಿ, ಪುರಸಭೆ ಕೆಟ್ಟ ವ್ಯವಸ್ಥೆ ಕುರಿತು ಸಾರ್ವಜನಿಕರು ಗಲ್ಲಿಗಲ್ಲಿಯಲ್ಲಿ ಮಾತನಾಡುತ್ತಿದ್ದಾರೆ. ಪಟ್ಟಣದ ಮಾನ ರ‍್ಯಾದೆ ಹರಾಜು ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ ಸಾರ್ವಜನಿಕರು ಮುಖ್ಯಾಧಿಕಾರಿಗೆ ಉತ್ತರ ಕೊಡಲು ಹೇಳಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತಕ್ಕೆ ತಲುಪಿದಾಗ ಪಿಎಸೈ ರಾಮನಗೌಡ ಸಂಕನಾಳ ತಮ್ಮ ಸಿಬ್ಬಂದಿಗಳೊAದಿಗೆ ಮಧ್ಯ ಪ್ರವೇಶ ಮಾಡಬೇಕಾಯಿತು. ಪುರಸಭೆಯ ಹಾಳಾದ ವ್ಯವಸ್ಥೆಯ ಚಿತ್ರಣವನ್ನು ಬಿಚ್ಚಿಟ್ಟ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ನಿಮಗೆ ಜನರ ಸೇವೆ ಮಾಡಲೆಂದೇ ಸರಕಾರ ಸಂಬಳ ಕೊಡುತ್ತದೆ ಎಂಬ ಅರಿವು ನಿಮಗೆ ಇರಬೇಕು ಎಂದರು.
ಯಾವ ವಿಷಯಕ್ಕೂ ನೇರ ಸಮರ್ಪಕ ಉತ್ತರ ನೀಡದ ಮುಖ್ಯಾಧಿಕಾರಿ ಘಟಕಾಂಬಳೆ ಅವರು ತಡವರಿಸಿದರು, ಇದಕ್ಕೆ ಸಾರ್ವಜನಿಕರು ಒಂದು ಸ್ಪಷ್ಟ ವಾಗ್ದಾನ ಕೊಡದೆ ಹೋದರೆ ನಾವು ಮುಂದೆ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದಾಗ ಆದಷ್ಟು ಬೇಗ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದಾಗ ಪರಿಸ್ಥಿತಿ ತಿಳಿಯಾಯಿತು.
ಈ ಸಮಯದಲ್ಲಿ ಪುರಸಭೆ ಸದಸ್ಯ ಪರಶುರಾಮ ತಂಗಡಗಿ, ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಸಮಾಜ ಸೇವಕ ರಾಮನಗೌಡ ಬಾಗೇವಾಡಿ, ಮುಖಂಡ ಮಂಜೂರ ಅಹ್ಮದ ಬೇಪಾರಿ, ಅಂಬೇಡ್ಕರ ಸೇನೆ ತಾಲೂಕಾಧ್ಯಕ್ಷ ಗೋಪಾಲ ಕಟ್ಟಿಮನಿ ಹಾಗೂ ಸಾರ್ವಜನಿಕರು ಇದ್ದರು.
