ಉದಯವಾಹಿನಿ , ನ್ಯೂಯಾರ್ಕ್ : ದಿ ಆರ್ಟ್ ಆಫ್ ಲಿವಿಂಗ್​ನ ಸಂಸ್ಥಾಪಕ ಹಾಗೂ ಜಾಗತಿಕ ಆಧ್ಯಾತ್ಮಿಕ ಗುರು ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ನೇತೃತ್ವದಲ್ಲಿ 150 ದೇಶಗಳಿಂದ 1.21 ಕೋಟಿಗೂ ಹೆಚ್ಚಿನ ಜನರು ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮೂಹಿಕ ಧ್ಯಾನದಲ್ಲಿ ಭಾಗವಹಿಸಿದರು. ತಜ್ಞರು ಇದನ್ನು ಜಾಗತಿಕ ಕಲ್ಯಾಣಕ್ಕೆ ಹೊಸ ಆಯಾಮವನ್ನು ನೀಡುವ ಮಹತ್ವದ ಕ್ಷಣವೆಂದು ಹೇಳುತ್ತಿದ್ದಾರೆ. ವಿಶ್ವ ಧ್ಯಾನ ದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಗತ್ತಿನೆಲ್ಲೆಡೆ ಜನರಲ್ಲಿ ಹೆಚ್ಚುತ್ತಿರುವ ಆತಂಕ, ಒತ್ತಡ, ಸಂಘರ್ಷ ಮತ್ತು ಮಾನಸಿಕ ಆರೋಗ್ಯ ಸವಾಲುಗಳ ನಡುವೆಯೇ ಮಾನವಕುಲ ಹುಡುಕುತ್ತಿರುವ ಶಾಂತಿ ಮತ್ತು ಸಹನಶೀಲತೆಯನ್ನು ಧ್ಯಾನದ ಅಭ್ಯಾಸದ ಮೂಲಕ ಕಂಡುಕೊಳ್ಳುವ ಬಗೆಯನ್ನು ಈ ಧ್ಯಾನಾಸಕ್ತರ ಸಂಖ್ಯೆ ಸ್ಪಷ್ಟವಾಗಿ ಸಾಬೀತುಪಡಿಸಿತು.
ಜಗತ್ತಿನಲ್ಲಿ ಮಾನಸಿಕ ನೆಮ್ಮದಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ನೆಲೆಗೊಳಿಸುವ ಉದ್ದೇಶದಿಂದ 2024ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21ನ್ನು ‘ವಿಶ್ವ ಧ್ಯಾನ ದಿನ’ವೆಂದು ಅಧಿಕೃತವಾಗಿ ಅಂಗೀಕರಿಸಿತು. ಈ ವರ್ಷದ ಕಾರ್ಯಕ್ರಮವು ನ್ಯೂಯಾರ್ಕ್ ನಗರದ ವಿಶ್ವಸಂಸ್ಥೆಯ ಟ್ರಸ್ಟೀಶಿಪ್ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಿತು. ಗುರುದೇವ ರವಿಶಂಕರ್ ಅವರ ನೇತೃತ್ವದಲ್ಲಿ ನಡೆದ ಧ್ಯಾನದ ಕಾರ್ಯಕ್ರಮದಲ್ಲಿ ರಾಜತಾಂತ್ರಿಕರು ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಧ್ಯಾನದಲ್ಲಿ ಭಾರತದ ಗ್ರಾಮೀಣ-ನಗರ ಪ್ರದೇಶಗಳೂ ಸೇರಿದಂತೆ ಆಫ್ರಿಕಾ, ಯುರೋಪ್, ಏಷ್ಯಾ, ಅಮೆರಿಕಾ ಹಾಗೂ ಆಸ್ಟ್ರೇಲಿಯಾ ಖಂಡಗಳಿಂದಲೂ ಜನರು ಆನ್​​ಲೈನ್ ಮೂಲಕ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!