ಉದಯವಾಹಿನಿ, ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ ದಾಳಿ ವೇಳೆ `ದೇವರ ದಯೆ’ ಯಿಂದ ಬದುಕುಳಿದಿದ್ದೇವೆ ಎಂದು ಪಾಕಿಸ್ತಾನದ ರಕ್ಷಣಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಹೇಳಿದ್ದಾನೆ. ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ ಸಮಾವೇಶದಲ್ಲಿ ಮಾತನಾಡಿ, ಮೇ ತಿಂಗಳಲ್ಲಿ ನಡೆದ 4 ದಿನಗಳ ಮೇ ಸಂಘರ್ಷದ ವೇಳೆ ಪಾಕ್ ಸಶಸ್ತ್ರ ಪಡೆಗಳಿಗೆ ದೇವರ ನೆರವು ಸಿಕ್ಕಿತು. ನನಗೂ ಹಾಗೆ ಅನಿಸುತ್ತಿದೆ ಎಂದಿದ್ದಾನೆ.
ಈ ಸಮಾವೇಶದಲ್ಲಿ ಮಾತಾಡಿರುವ ಆಸಿಮ್, ಅಫ್ಘಾನಿಸ್ತಾನದ ಗಡಿಯಾದ್ಯಂತ ಒಳನುಸುಳುವ ಉಗ್ರರಲ್ಲಿ ಆಫ್ಘಾನ್ ಪ್ರಜೆಗಳೇ ಹೆಚ್ಚಾಗಿದ್ದಾರೆ. ಪಾಕಿಸ್ತಾನ ಮತ್ತು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ತಾಲಿಬಾನ್ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾನೆ. ತನಗೆ ಸಿಕ್ಕಿರುವ ಹೊಸ ಸರ್ವೊಚ್ಛ ಅಧಿಕಾರದ ಪ್ರಯೋಗ ಮಾಡಲು ಹಂಬಲಿಸುತ್ತಿರುವ ಮುನೀರ್, ಇಸ್ಲಾಮಿಕ್ ದೇಶದಲ್ಲಿ ಜಿಹಾದ್ ನಡೆಸುವಂತಿಲ್ಲ. ಯಾರೂ ಆಡಳಿತಗಾರರ ಕಟ್ಟಳೆ ಮೀರುವಂತಿಲ್ಲ ಎಂಬ ಸೂಚನೆಯನ್ನೂ ನೀಡಿದ್ದಾನೆ. 26 ನಾಗರಿಕರನ್ನು ಹತ್ಯೆಗೈದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನದ ಸೇನಾ ನೆಲೆ ಮತ್ತು ಉಗ್ರರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು.
