ಉದಯವಾಹಿನಿ, ಈಜಿಪ್ಟ್ ರಾಜಧಾನಿ ಕೈರೋ ಸಮೀಪ ನಡೆದ ಇತ್ತೀಚಿನ ಪುರಾತತ್ವ ಉತ್ಪನನವು ಜಾಗತಿಕ ಇತಿಹಾಸ ವಲಯದಲ್ಲಿ ಕುತೂಹಲ ಮೂಡಿಸಿದೆ. ಪುರಾತತ್ವಜ್ಞರು ಸುಮಾರು 4,500 ವರ್ಷಗಳಷ್ಟು ಹಳೆಯದಾದ ಸೂರ್ಯ ದೇವರಿಗೆ ಸಮರ್ಪಿತ ದೇವಾಲಯವನ್ನು ಪತ್ತೆಹಚ್ಚಿದ್ದು, ಇದು ಪ್ರಾಚೀನ ಈಜಿಪ್ಟ್ನ ಧಾರ್ಮಿಕ ಮತ್ತು ವೈಜ್ಞಾನಿಕ ಜೀವನದ ಕುರಿತು ಮಹತ್ವದ ಸುಳಿವುಗಳನ್ನು ನೀಡಿದೆ.
ಐದನೇ ರಾಜವಂಶದ ಫರೋ ನೆಸೆರೆ ಪ್ರಥಮರ ಕಾಲಕ್ಕೆ ಸೇರಿದ ಈ ದೇವಾಲಯವನ್ನು ಜಂಟಿ ಇಟಾಲಿಯನ್-ಪೋಲಿಷ್ ತಂಡ ಉತ್ಪನನದ ವೇಳೆ ಗುರುತಿಸಿದೆ.
ಉತ್ಪನನದಲ್ಲಿ ಕಲ್ಲಿನ ಮೇಲೆ ಕೆತ್ತಿದ ಧಾರ್ಮಿಕ ಕ್ಯಾಲೆಂಡರ್, ವಿವಿಧ ಹಬ್ಬಗಳ ಉಲ್ಲೇಖಗಳು ಹಾಗೂ ಖಗೋಳ ಅಧ್ಯಯನಕ್ಕೆ ಬಳಸಿದ ಛಾವಣಿಯ ಅವಶೇಷಗಳು ಪತ್ತೆಯಾಗಿವೆ. ಸುಮಾರು 10,000 ಚದರ ಅಡಿ ವಿಸ್ತೀರ್ಣದ ಈ ದೇವಾಲಯದಲ್ಲಿ ಗ್ರಾನೈಟ್ ಸ್ತಂಭಗಳು, ಛಾವಣಿಗೆ ಕರೆದೊಯ್ಯುವ ಮೆಟ್ಟಿಲು, ಉದ್ದವಾದ ದಾರಿಗಳು ಮತ್ತು ನಕ್ಷತ್ರ ಅಧ್ಯಯನದ ಸೌಲಭ್ಯಗಳು ಕಂಡುಬಂದಿವೆ. ಈ ಆವಿಷ್ಕಾರವು ಪ್ರಾಚೀನ ಈಜಿಪ್ಟ್ ಧರ್ಮದ ಜೊತೆಗೆ ವಿಜ್ಞಾನ ಮತ್ತು ಬ್ರಹ್ಮಾಂಡದ ಅರಿವಿನಲ್ಲೂ ಎಷ್ಟು ಮುಂದುವರಿದಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಪಿರಮಿಡ್‌ಗಳು ಮತ್ತು ಸಮಾಧಿಗಳಿಗಾಗಿ ಪ್ರಸಿದ್ಧವಾದ ಈಜಿಪ್ಟ್ನಲ್ಲಿ, ಸೂರ್ಯ ದೇವಾಲಯದ ಈ ಆವಿಷ್ಕಾರವು ಸೂರ್ಯ ಆರಾಧನೆ ಎಷ್ಟು ಕೇಂದ್ರಸ್ಥಾನ ಹೊಂದಿತ್ತೆಂಬುದನ್ನು ತೋರಿಸುತ್ತದೆ. ಕ್ರಿ.ಪೂ. 25ನೇ ಶತಮಾನದಲ್ಲಿ ಸೂರ್ಯ ದೇವರನ್ನು ಸೃಷ್ಟಿಕರ್ತ ಮತ್ತು ಪರಮಶಕ್ತಿಯ ರೂಪವಾಗಿ ಕಾಣಲಾಗುತ್ತಿತ್ತು.
