ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಶಕದ ಹಿಂದೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸುವ ಕಡತವೊಂದು ಜೆಫ್ರಿ ಎಪ್ಸನ್ ತನಿಖೆಗೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆ ಮಾಡಿರುವ ಕಡತಗಳಲ್ಲಿ ಸೇರಿದೆ. ಆದರೆ ಈ ಆರೋಪ ದೃಢಪಟ್ಟಿಲ್ಲ. ಅಮೆರಿಕದ ನ್ಯಾಯಾಂಗ ಇಲಾಖೆ ಇದನ್ನು “ಅಸತ್ಯ ಮತ್ತು ಪ್ರಚೋದನಕಾರಿ” ಎಂದು ಬಣ್ಣಿಸಿದೆ.
ಎಪ್‌ಸ್ಟೀನ್ ಕಡತಗಳ ಪಾರದರ್ಶಕ ಕಾಯ್ದೆಯ ಅನುಸಾರ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಕಡತಗಳಲ್ಲಿ ಈ ವಿವಾದಾತ್ಮಕ ಕಡತವೂ ಸೇರಿದೆ. ಈ ಕಡತಗಳ ಬಿಡುಗಡೆಗೆ ಟ್ರಂಪ್ ಮೊದಲು ವಿರೋಧ ವ್ಯಕ್ತಪಡಿಸಿದ್ದರೂ, ಈ ಮಸೂದೆಗೆ ಕಳೆದ ತಿಂಗಳು ಟ್ರಂಪ್ ಸಹಿ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಇಲಾಖೆ ವೆಬ್‌ಸೈಟ್‌ನಲ್ಲಿ ಇದೀಗ 30 ಸಾವಿರ ಪುಟಗಳಷ್ಟು ದಾಖಲೆಗಳು ಲಭ್ಯ ಇವೆ. 2020ರ ಅಕ್ಟೋಬರ್ 27ರಂದು ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಶನ್, ಐಷಾರಾಮಿ ಕಾರಿನ ಚಾಲಕನಿಂದ ಸುಳಿವು ದಾಖಲಿಸಿಕೊಂಡಿತ್ತು. ಟ್ರಂಪ್ ಮತ್ತು ಎಪ್‌ಸ್ಟೀನ್ ನಡುವೆ 1995ರಲ್ಲಿ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಬಗ್ಗೆ ಚಾಲಕ ಮಾಹಿತಿ ನೀಡಿದ್ದು ವರದಿಯಲ್ಲಿ ಸೇರಿದೆ. “ಎಪ್‌ಸ್ಟೀನ್ ಪಕ್ಕದಲ್ಲಿದ್ದ ಟ್ರಂಪ್ ಅವರನ್ನು ತೋರಿಸಿ, ಈ ಸಂದರ್ಭ ಹಾಜರಿದ್ದ ಅಪರಿಚಿತ ಮಹಿಳೆ “ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದು ತಿಳಿಸಿದ್ದಾಗಿ ಚಾಲಕ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ವಿಚಾರದಲ್ಲಿ ಪೊಲೀಸರನ್ನು ಕೂಡಾ ಸಂಪರ್ಕಿಸಿದ್ದಾಗಿ ಮಹಿಳೆ ಮಾಹಿತಿ ನೀಡಿದ್ದರು. ಬಳಿಕ 2020ರ ಜನವರಿಯಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡರು ಎಂದು ಚಾಲಕ ವಿವರಿಸಿದ್ದ. ಆದರೆ ಈ ವರದಿಯ ಅಂಶಗಳನ್ನು ಪರಿಷ್ಕರಿಸಲಾಗಿದೆ ಹಾಗೂ ಆರೋಪಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ ಎಂದು ವರದಿಯಾಗಿದೆ.
