ಉದಯವಾಹಿನಿ, ಚಿತ್ರದುರ್ಗ: ಹಿರಿಯೂರು ಬಳಿ ಸಂಭವಿಸಿದ ಬಸ್ ದುರಂತದಲ್ಲಿ ಕಣ್ಮರೆಯಾಗಿದ್ದ ಮಗಳನ್ನು ತಂದೆ ಶವಾಗಾರದಲ್ಲಿ ಪತ್ತೆಹಚ್ಚಿದ್ದಾರೆ. ಗಣೇಶನ ಪೆಂಡೆಂಟ್ ಇದ್ದ ಲಾಕೆಟ್ ಮೂಲಕ ಇದೇ ನನ್ನ ಮಗಳು ಎಂದು ಮಾನಸ ತಂದೆ ಗೋಗರೆದಿದ್ದಾರೆ. ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಈವರೆಗೂ 6 ಮೃತದೇಹಗಳು ಪತ್ತೆಯಾಗಿದ್ದು, ಈ ಪೈಕಿ ನವ್ಯಾ ಹಾಗೂ ಮಾನಸಾ ಶವಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಶವಾಗಾರದಲ್ಲಿ ಮಾನಸಾ ತಂದೆ ಗಣೇಶನ ಪೆಂಡೆಂಟ್ ಇದ್ದ ಲಾಕೆಟ್ ಮೂಲಕ ಮಗಳ ಶವವನ್ನು ಪತ್ತೆಹಚ್ಚಿದ್ದಾರೆ ಎಂದು ಚಿತ್ರದುರ್ಗ ಎಸ್‌ಪಿ ರಂಜಿತ್ ಬಂಡಾರು ತಿಳಿಸಿದ್ದಾರೆ.
ಈ ಕುರಿತು ಮಾನಸಾ ತಂದೆ ಚಂದ್ರೇಗೌಡ ಮಾತನಾಡಿ, ಮಗಳಿಗೆ ಪ್ರೀತಿಯಿಂದ ಚಿನ್ನದ ಸರ ಹಾಗೂ ಗಣೇಶನ ಡಾಲರ್ ಕೊಡಿಸಿದ್ದೆ. ಎಂಗೇಜ್‌ಮೆಂಟ್ ಆಗಿತ್ತು. ಮದುವೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ವಿಧಿಯಾಟ ಅವಳು ಬದುಕುಳಿಯಲಿಲ್ಲ. ಕೊನೆಗೆ ಬೆಂಗಳೂರಿನಿಂದ ಗೋಕರ್ಣ ಹೋಗಲು ನಾನೇ ಹೋಗಿ ಬಸ್ ಹತ್ತಿಸಿದ್ದೆ ಎಂದು ಕಣ್ಣೀರಿಟ್ಟಿದ್ದಾರೆ.
