ಉದಯವಾಹಿನಿ, ಅಶ್ಲೀಲ ಸಂದೇಶ ಮತ್ತು ಬೆದರಿಕೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಅವರು ಬೆಂಗಳೂರಿನ 46ನೇ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಸಾಕ್ಷ್ಯವನ್ನು ದಾಖಲಿಸಿದರು.
ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದ 11 ಆರೋಪಿಗಳ ವಿರುದ್ಧ ನಟಿ ರಮ್ಯಾ ಅವರು ದೂರು ದಾಖಲಿಸಿದ್ದರು. ಆ ಸಂಬಂಧ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಅವರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇಂದಿನಿಂದ ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್ ವಿಚಾರಣೆ ಆರಂಭವಾಗಿದೆ.ದೂರುದಾರೆಯಾಗಿರುವ ರಮ್ಯಾ ಮೊದಲ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ನಿಂತು ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳ ಎದುರು ಬಳಿಕ ಮಾತನಾಡಿದ ಅವರು, ಸಾಕ್ಷಾಧಾರಗಳನ್ನು ಕೊಡಲು ಹೇಳಿದ್ದರು. ಕೊಟ್ಟಿದ್ದೇವೆ, ಮುಂದಿನ ವಿಚಾರಣೆಯಲ್ಲಿ ಕ್ರಾಸ್ ಎಕ್ಸಾಮಿನೇಷನ್‌ಗೆ ಕರೆದಿದ್ದಾರೆ. ನನಗೂ ಈ ಥರ ಮಾಡಬೇಕು ಅಂತ ಆಸೆ ಏನಿಲ್ಲ. ಅವರನ್ನು ನೋಡಿದಾಗ ನನಗೂ ಬೇಜಾರಾಗುತ್ತದೆ. ಆದರೆ ಇದನ್ನು ನಾನು ನನಗಾಗಿ ಮಾಡುತ್ತಿಲ್ಲ. ಹೆಣ್ಣು ಮಕ್ಕಳಿಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೋಲ್ ಮಾಡ್ತಾರೆ, ಕಿರುಕುಳ ಕೊಡ್ತಾರೆ. ಇದನ್ನು ನಿಲ್ಲಿಸಬೇಕು, ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಬೇಕು ಎಂಬ ಕಾರಣಕ್ಕೆ ನಾನು ಇದನ್ನು ಮಾಡುತ್ತಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ.
ಎಲ್ಲಾ ಹೆಣ್ಣು ಮಕ್ಕಳಿಗಾಗಿ ಫೈಟ್ ಮಾಡುತ್ತಿದ್ದೇನೆ. ನನಗಾಗಿ ಅಲ್ಲ. ಒಂದು ವೇಳೆ ನನಗೋಸ್ಕರ ಆಗಿದ್ದರೆ, ನಾನು ಯಾವಾಗಲೋ ಕೇಸ್ ಅನ್ನು ವಾಪಸ್ ಪಡೆಯುತ್ತಿದ್ದೆ. ಯಾರಿಗೂ ಶಿಕ್ಷೆ ಆಗುವುದು ನನಗೆ ವೈಯಕ್ತಿಕವಾಗಿ ಇಷ್ಟವಿಲ್ಲ. ಆದರೆ ನಾನು ಇಂದು ಸುಮ್ನಾದರೆ ಮುಂದೆ ಇನ್ನಷ್ಟು ಹೆಣ್ಣು ಮಕ್ಕಳಿಗೆ ಟ್ರೋಲ್ ಮಾಡುತ್ತಾರೆ. ರೇಪ್ ಮಾಡುತ್ತೇನೆ, ಕೊಲೆ ಮಾಡುತ್ತೇನೆ ಅಂತ ಬೆದರಿಕೆ ಹಾಕೋದು, ಬೆತ್ತಲೆ ಫೋಟೋಗಳನ್ನು ಕಳಿಸೋದನ್ನು ಅವರು ನಿಲ್ಲಿಸೋದಿಲ್ಲ. ಈ ಎಲ್ಲಾ ಕಾರಣಕ್ಕಾಗಿ ನಾನು ನಿಂತಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!