ಉದಯವಾಹಿನಿ, ಮಂಗಳೂರು: ನಗರ ಮಧ್ಯಭಾಗದಲ್ಲಿರುವ ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್ ನಗರ ಸಂಚಾರಕ್ಕೆ ದೊಡ್ಡ ತೊಂದರೆಯಾಗಿ ಪರಿಣಮಿಸಿದೆ. ದಿನಕ್ಕೆ ಹಲವು ಬಾರಿ ರೈಲು ಸಂಚಾರದ ಕಾರಣ ಗೇಟ್ ಮುಚ್ಚಲಾಗುತ್ತಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ನಿತ್ಯವೂ ದೀರ್ಘ ಸಮಯ ಕಾಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಕಚೇರಿ, ಶಾಲೆ, ಕಾಲೇಜುಗಳಿಗೆ ತೆರಳುವ ಸಮಯದಲ್ಲಿ ಈ ಗೇಟ್ ಮುಚ್ಚುವುದರಿಂದ ಟ್ರಾಫಿಕ್ ದಟ್ಟಣೆ ಹೆಚ್ಚಾಗಿ ಜನರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ.
ಸ್ಥಳೀಯರ ಪ್ರಕಾರ ಪಾಂಡೇಶ್ವರ ರೈಲ್ವೆ ಗೇಟ್ ದಿನಕ್ಕೆ ಕನಿಷ್ಠ 12 ಬಾರಿ ಮತ್ತು ಗರಿಷ್ಠ 16 ಬಾರಿ ಮುಚ್ಚಲಾಗುತ್ತದೆ. ಪ್ರತಿ ಬಾರಿ ಗೇಟ್ ಮುಚ್ಚಿದಾಗ ಸುಮಾರು 15 ರಿಂದ 20 ನಿಮಿಷಗಳವರೆಗೆ ವಾಹನಗಳು ನಿಲ್ಲಬೇಕಾಗುತ್ತದೆ. ವಿಶೇಷವಾಗಿ ಬೆಳಗ್ಗೆ 8ರಿಂದ 9.30ರ ನಡುವೆ ಪೀಕ್ ಅವಧಿಯಲ್ಲಿ ಮೂರು ಬಾರಿ ಗೇಟ್ ಮುಚ್ಚುವ ಸಂದರ್ಭವೂ ಉಂಟಾಗುತ್ತಿದ್ದು, ಕೆಲಸಕ್ಕೆ ಹೋಗುವವರು ಮತ್ತು ಶಾಲಾ ಮಕ್ಕಳಿಗೆ ಇದು ದೊಡ್ಡ ಸಮಸ್ಯೆಯಾಗುತ್ತಿದೆ. ಸಂಜೆ ವೇಳೆಯಲ್ಲೂ ಇದೇ ರೀತಿಯ ಪರಿಸ್ಥಿತಿ ಮುಂದುವರಿಯುತ್ತಿದ್ದು, ವಾಹನಗಳ ದಟ್ಟಣೆ ಹೆಚ್ಚುತ್ತಿದೆ.
ಈ ಬಗ್ಗೆ ನಿತ್ಯ ಪ್ರಯಾಣಿಕೆ ಸರಿತಾ ಮಾತನಾಡಿ, ಬೆಳಗ್ಗೆ ಡ್ಯೂಟಿಗೆ ಹೋಗುವವರು ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದರೆ ಆಗುತ್ತದೆ. ಕೆಲವೊಮ್ಮೆ ಗೇಟ್ ಮುಚ್ಚಿದರೆ ಅರ್ಧ ಗಂಟೆಯವರೆಗೆ ಕಾಯಬೇಕಾಗುತ್ತದೆ. ಗೇಟ್ ತೆರೆದ ನಂತರವೂ ಟ್ರಾಫಿಕ್ ಸರಿಯಾಗಲು ಇನ್ನೂ ಹತ್ತು ನಿಮಿಷ ಬೇಕಾಗುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಗೇಟ್ ಬಳಿ ಟೈಮಿಂಗ್ ಬೋರ್ಡ್ ಅಳವಡಿಕೆ: ಈ ಸಮಸ್ಯೆಯನ್ನು ಗಮನಿಸಿ ನಾಗರಿಕ ಸಂಘಟನೆ ಅಧ್ಯಯನ ನಡೆಸಿದ್ದು, ರೈಲು ಸಂಚಾರದ ಸಮಯವನ್ನು ಜನರಿಗೆ ತಿಳಿಸಲು ಗೇಟ್ ಬಳಿ ಟೈಮಿಂಗ್ ಬೋರ್ಡ್ ಅಳವಡಿಸಿದೆ. ದಿನಕ್ಕೆ ಕನಿಷ್ಠ 12 ರಿಂದ 16 ಬಾರಿ ಗೇಟ್ ಮುಚ್ಚುತ್ತದೆ. ಪೀಕ್ ಅವಧಿಯಲ್ಲಿ ಮೂರು ಬಾರಿ ಗೇಟ್ ಬೀಳುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ. ಜನರಿಗೆ ಮಾಹಿತಿ ದೊರಕುವಂತೆ ಟೈಮಿಂಗ್ ಬೋರ್ಡ್ ಅಳವಡಿಸಿದ್ದೇವೆ. ಜೊತೆಗೆ ವಾಹನಗಳು ಸಾಲಿನಲ್ಲಿ ನಿಲ್ಲುವಂತೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಸದಸ್ಯ ಪುನೀತ್ ತಿಳಿಸಿದ್ದಾರೆ.
