ಉದಯವಾಹಿನಿ, ಮಂಡ್ಯ: ವಿವಾಹೇತರ ಸಂಬಂಧಕ್ಕೆ ಅಡ್ಡಿ ಎಂದು ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಮಾರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಕೊಲೆಯಾದವರು. ಸಿದ್ದಲಿಂಗಪ್ಪನ ಪತ್ನಿ ಶಾಲಿನಿ (32), ಮರಳಗಾಲ ಗ್ರಾಮದ ಹರೀಶ (33), ಸಂತೋಷ್ ಕುಮಾರ್ (29) ಮತ್ತು ಗಣೇಶ ಬಿ.ಆ‌ರ್. ಬಿನ್ ಲೇಟ್ ರಾಮಸಿದ್ದು (29) ಕೊಲೆ ಪ್ರಕರಣದ ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆಯ ಪೂರ್ಣ ವಿವರ: ಮಾ.6ರಂದು ಶ್ರೀರಂಗಪಟ್ಟಣ ತಾಲೂಕಿನ ಮಾರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಅವರು ಕೆ.ಶೆಟ್ಟಹಳ್ಳಿ ಗಣಪತಿ ದೇವಸ್ಥಾನಕ್ಕೆ ಪೂಜೆಗೆ ಹೋಗಿ ರಾತ್ರಿ ಮನೆಗೆ ಬಾರದೇ ಇದ್ದಾಗ ಮತ್ತು ಫೋನ್​ ಸ್ವಿಚ್ ಆಫ್ ಆಗಿದ್ದರಿಂದ ಸಂಬಂಧಿಕರು ಹುಡುಕಾಟ ನಡೆಸಿದ್ದಾರೆ. ರಾತ್ರಿ ಸಿಡಿಎಸ್ ಕಾಲುವೆಯ ತೂಬಿನ ಹತ್ತಿರದ ರಸ್ತೆಯಲ್ಲಿ ಆರ್ಚಕ ಸಿದ್ದಲಿಂಗಪ್ಪನ ಚಪ್ಪಲಿ ಮತ್ತು ಪಕ್ಕದ ಹುಲ್ಲಿನ ಮೇಲೆ ರಕ್ತ ಚೆಲ್ಲಿದ್ದು, ಅಕ್ಕಪಕ್ಕದಲ್ಲಿ ಅರ್ಚಕ ಧರಿಸುತ್ತಿದ್ದ ರುದ್ರಾಕ್ಷಿಮಣಿ ಸ್ಪಟಿಕಮಣಿ ಸರ, ಅದರಲ್ಲಿದ್ದ ಡಾಲರ್‌ಗಳು ಬಿದ್ದಿದ್ದವು. ಬೈಕ್ ಕಾಲುವೆ ಒಳಗೆ ಬಿದ್ದಿತ್ತು. ರಾತ್ರಿಯಿಡೀ ಹುಡುಕಿದರೂ ಅರ್ಚಕ ಪತ್ತೆಯಾಗಿರಲಿಲ್ಲ. ಬಳಿಕ ಅದೇ ಗ್ರಾಮದ ಸಿಡಿಎಸ್ ನಾಲೆಯ ತೂಬಿನಲ್ಲಿ ಸಿದ್ದಲಿಂಗಪ್ಪನ ಶವ ಸಿಲುಕಿಕೊಂಡಿತ್ತು.

ಮೃತದೇಹದ ಮೇಲೆ ಒಳ ಉಡುಪು ಮಾತ್ರ ಇದ್ದು ಮುಖ, ತಲೆಗೆ ಗಾಯಗಳಾಗಿದ್ದು ಕಂಡು ಬಂದಿದ್ದರಿಂದ ಯಾರೋ ಅಪರಿಚಿತರು ಯಾವುದೋ ಉದ್ದೇಶಕ್ಕೆ ಹೊಡೆದು ಕೊಲೆ ಮಾಡಿರುವ ಬಗ್ಗೆ ಮೃತನ ಅಣ್ಣ ಬಾಲಸುಂದರ್ ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು.ಕೊಲೆ ಆರೋಪಿಗಳ ಪತ್ತೆಗೆ ಎಸ್​ಪಿ ಡಾ.ಶೋಭಾರಾಣಿ ವಿ.ಜೆ ಅವರು ಎಎಸ್​ಪಿ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ ನೇತೃತ್ವದಲ್ಲಿ ಪಿಐ ಆನಂದ ಕುಮಾ‌ರ್ ಹೆಚ್, ಶರತ್ ಹೆಚ್.ಪಿ, ಲೋಕೇಶ್, ಹಫೀಜ್ ಪಾಷ, ಚಂದ್ರಶೇಖ‌ರ್, ಶ್ರೀಧರ್, ರವಿಕಿರಣ್ ಹಾಗೂ ಲೋಕೇಶ್ ಅವರನ್ನೊಳಗೊಂಡ ತಂಡ ರಚಿಸಿದ್ದರು.

ಎಸ್​​ಪಿ ಮಾಹಿತಿ: ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ, ”ಸಿದ್ದಲಿಂಗಪ್ಪ 14 ವರ್ಷಗಳ ಹಿಂದೆ ಸ್ವಂತ ಅಕ್ಕನ ಮಗಳನ್ನೇ ಮದುವೆ ಮಾಡಿಕೊಂಡಿದ್ದ. ದಂಪತಿಗೆ ಎರಡು ಮಕ್ಕಳಿದ್ದು, ಅರ್ಚಕನ ಪತ್ನಿ ಶಾಲಿನಿ ಅದೇ ಊರಿನ ಟಿಪ್ಪರ್ ಚಾಲಕ ಹರೀಶ ಎಂ.ಸಿ ಎಂಬ ಅವಿವಾಹಿತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಒಂದೂವರೆ ವರ್ಷದ ಹಿಂದೆ ಪತ್ನಿಯ ಈ ವಿಚಾರವು ಸಿದ್ದಲಿಂಗಪ್ಪನ ಗಮನಕ್ಕೆ ಬಂದಿತ್ತು. ಆ ಬಳಿಕ ವೈಮನಸ್ಸು ಉಂಟಾಗಿ, ಅರ್ಚಕ ತನ್ನ ಪತ್ನಿಗೆ ಕಿರುಕುಳ ಕೊಡುತ್ತಿದ್ದ. ಹೀಗಾಗಿ, ತನ್ನ ಪತಿಯನ್ನು ಮುಗಿಸಬೇಕೆಂದು ಶಾಲಿನಿ ತನ್ನ ಪ್ರಿಯಕರ ಹರೀಶನಿಗೆ ತಿಳಿಸಿದ್ದಳು” ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!