ಉದಯವಾಹಿನಿ, ಟೊಕಿಯೊ: ಮಧ್ಯ ಜಪಾನ್‌ನ ಕಾರ್ಖಾನೆಯೊಂದರಲ್ಲಿ ಅಪರಿಚಿತ ವ್ಯಕ್ತಿ ಚಾಕು ಹಿಡಿದು ಮನಬಂದಂತೆ ದಾಳಿ ನಡೆಸಿದ್ದು ಸುಮಾರು 14 ಮಂದಿ ಗಾಯಗೊಂಡಿದ್ದಾರೆ. ಜತೆಗೆ ಕಾರ್ಖಾನೆಯಲ್ಲಿ ರಾಸಾಯನಿಕವನ್ನು ಸಿಂಪಡಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “14 ಜನರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಶಿಜುವೊಕಾ ಪ್ರದೇಶದ ಮಿಶಿಮಾ ನಗರದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಟೊಮೊಹರು ಸುಗಿಯಾಮಾ ಹೇಳಿದ್ದಾರೆ.
ಕ್ಯೋಡೋ ಸುದ್ದಿ ಸಂಸ್ಥೆಯ ಪ್ರಕಾರ, ಟೋಕಿಯೊದ ಪಶ್ಚಿಮದಲ್ಲಿರುವ ಮಿಶಿಮಾದಲ್ಲಿರುವ ರಬ್ಬರ್ ಕಾರ್ಖಾನೆಯಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದು ದಾಳಿ ನಡೆಸಿದ್ದಾನೆ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಸದ್ಯ ದಾಳಿ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆಯಾಗಿದೆ. ದಾಳಿಕೋರ ಇದ್ದಕ್ಕಿದ್ದಂತೆ ಅಲ್ಲಿದ್ದವರಿಗೆ ಚಾಚುವಿನಿಂದ ಇರಿದಿದ್ದಾನೆ. ಜತೆಗೆ ರಾಸಾಯನಿಕವೊಂದನ್ನೆ ಸ್ಪ್ರೇ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯೊಕೊಹಮಾ ರಬ್ಬರ್ ಕೋ. ಕಂಪನಿ ಇದಾಗಿದ್ದು, ಇಲ್ಲಿ ಬಸ್ ಮತ್ತು ಟ್ರಕ್‌ಗಳ ಟೈರ್ ತಯಾರಿಸಲಾಗುತ್ತದೆ. ಜಪಾನ್‌ನಲ್ಲಿರುವ ಕಠಿಣ ನಿಯಮಗಳ ಕಾರಣದಿಂದ ಅಪರಾಧಗಳ ಸಂಖ್ಯೆ ಸಾಮಾನ್ಯವಾಗಿ ಕಡಿಮೆ ಎಂದು ಹೇಳಲಾಗುತ್ತಿದೆ. ಇದರ ಹೊರತಾಗಿಯೂ ಆಗಾಗ ದುಷ್ಕರ್ಮಿಗಳಿಂದ ಆಕ್ರಮಣ ನಡೆಯುತ್ತಿರುತ್ತದೆ. 2022ರಲ್ಲಿ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಹತ್ಯೆ ಸೇರಿದಂತೆ ಹಲವು ಬಾರಿ ದಾಳಿ ನಡೆದಿದೆ. 2023ರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ನಾಲ್ವರ ಸಾವಿಗೆ ಕಾರಣವಾದ ಜಪಾನ್‌ನ ವ್ಯಕ್ತಿಯೊಬ್ಬನಿಗೆ ಮರಣ ದಂಡನೆ ವಿಧಿಸಲಾಗಿತ್ತು. ಸದ್ಯ ಈ ದಾಳಿಗೆ ಜಪಾನ್ ಬೆಚ್ಚಿ ಬಿದ್ದಿದ್ದು, ಅಧಿಕಾರಿಗಳು ತನಿಖೆ ಆದೇಶ ಹೊರಡಿಸಿದ್ದಾರೆ.
