ಉದಯವಾಹಿನಿ, ಭೋಪಾಲ್ : ಮಧ್ಯ ಪ್ರದೇಶದ ರತ್ಲಂ ಜಿಲ್ಲೆಯ ಮಂಗ್ರೋಲ್ ಗ್ರಾಮ ಪಂಚಾಯತ್ ಕಚೇರಿಯಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದು, ಘಟನೆಯ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸ್ಥಳೀಯ ನಿವಾಸಿ ಗೋಪಾಲ್ ಪೆಟ್ರೋಲ್ ಸುರಿದು ಪಂಚಾಯತ್ ಕಚೇರಿಗೆ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ತಮ್ಮನ್ನು ಪಂಚಾಯತ್ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಗೋಪಾಲ್ ಈ ಕೃತ್ಯ ಎಸಗಿದ್ದಾನೆ. ಸದ್ಯ ಅತನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗೋಪಾಲ್ ಪಂಚಾಯತ್ ಕಟ್ಟಡಕ್ಕೆ ಪೆಟ್ರೋಲ್ ಸುರಿದು ಬೆಂಕಿ ಕಡ್ಡಿ ಗೀರುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಅಗ್ನಿ ಜ್ವಾಲೆ ಒಮ್ಮಲೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಸ್ಥಳಕ್ಕೆ ಧಾವಿಸಿದ ಸಾಲಖೇಡಿ ಪೊಲೀಸ್ ಠಾಣೆಯ ಸಿಬ್ಬಂದಿ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಸದ್ಯ ಪೊಲೀಸರ ವಶದಲ್ಲಿರುವ ಗೋಪಾಲ್ ತನ್ನ ಕೃತ್ಯಕ್ಕೆ ಏನು ಕಾರಣ ಎನ್ನುವುದನ್ನು ವಿವರಿಸಿದ್ದಾನೆ. ಗ್ರಾಮ ಪಂಚಾಯತ್ ಆಡಳಿತ ತನ್ನ ಯಾವ ಬೇಡಿಕೆಯನ್ನೂ ಈಡೇರಿಸದೆ ನಿರಂತರವಾಗಿ ನಿರ್ಲಕ್ಷ್ಯ ತೋರಿದ್ದರಿಂದಲೇ ಅಧಿಕಾರಿಗಳ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ʼʼಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಸೇರಿದಂತೆ ಹಲವು ಸರ್ಕಾರದ ಯೋಜನೆಗಳನ್ನು ತಮಗೆ ಮಂಜೂರು ಮಾಡುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೆ. ಆದರೆ ಇದನ್ನು ಯಾರೂ ಗಣನೆಗೆ ತೆಗೆದುಕೊಂಡಿಲ್ಲ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೀಗಾಗಿ ನನ್ನ ಅಪ್ರಾಪ್ತ ಪುತ್ರ ದಿನಗೂಲಿ ಮಾಡಬೇಕಾಗಿದೆʼʼ ಎಂದು ಹೇಳಿದ್ದಾನೆ.
