ಉದಯವಾಹಿನಿ, ತಿರುವನಂತಪುರಂ: ಹಿಂದೂಗಳ ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಈ ವರ್ಷ ಇದುವರೆಗೆ ಭೇಟಿ ನೀಡಿದ ಭಕ್ತರ ಸಂಖ್ಯೆ 30 ಲಕ್ಷ ದಾಟಿದೆ. ಡಿಸೆಂಬರ್ 25ರವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು 30,01,532 ಭಕ್ತರು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ. ಆದರೆ ಇದು ಕಳೆದ ವರ್ಷದ ದೇವಾಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಹೋಲಿಸಿದರೆ ಎರಡು ಲಕ್ಷ ಕಡಿಮೆಯಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಕಳೆದ ಋತುವಿನಲ್ಲಿ ಡಿಸೆಂಬರ್ 23ರಲ್ಲೇ ಭಕ್ತರ 30 ಲಕ್ಷ ಗಡಿ ದಾಟಿದ್ದು, 30,78,044 ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು.ಕಳೆದ ವರ್ಷ ಡಿಸೆಂಬರ್ 25ರ ವೇಳೆಗೆ ಶಬರಿಮಲೆ ದರ್ಶನ ಪಡೆದ ಭಕ್ತರ ಒಟ್ಟು ಸಂಖ್ಯೆ 32,49,756 ಆಗಿತ್ತು. 2023ರಲ್ಲಿ ಇದೇ ದಿನಾಂಕದವರೆಗೆ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಸುಮಾರು 28.42 ಲಕ್ಷವಾಗಿತ್ತು.
ಈ ಋತುವಿನ ಆರಂಭದಿಂದಲೇ ಭಾರೀ ಜನಸಂದಣಿ ಕಂಡುಬಂದಿತ್ತು. ಆದರೆ ಹೈಕೋರ್ಟ್ ನಿರ್ದೇಶನದ ಅನುಸಾರ ಜನಸಂದಣಿ ನಿಯಂತ್ರಣಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿಯು ವರ್ಚುವಲ್ ಕ್ಯೂ ಮತ್ತು ಸ್ಥಳೀಯ (ಸ್ಪಾಟ್) ಬುಕ್ಕಿಂಗ್‌ಗಳ ಮೇಲೆ ಕಟ್ಟುನಿಟ್ಟಿನ ಮಿತಿಗಳನ್ನು ವಿಧಿಸಿದ್ದರಿಂದ ಭಕ್ತರ ಸಂಖ್ಯೆ ಸ್ವಲ್ಪ ಪ್ರಮಾಣ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.ಈ ಋತುವಿನಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಭಕ್ತರು ದರ್ಶನ ಪಡೆದಿದ್ದು ನವೆಂಬರ್ 19ರಂದು. ದೇವಾಲಯ ತೆರೆದ ನಾಲ್ಕನೇ ದಿನವಾದ ಅಂದು 1,02,299 ಭಕ್ತರು ಭೇಟಿ ನೀಡಿದ್ದರು. ಡಿಸೆಂಬರ್ 12ರಂದು ಅತೀ ಕಡಿಮೆ ಜನಸಂದಣಿ ಕಂಡುಬಂದಿದ್ದು, ಆ ದಿನ 49,738 ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
