ಉದಯವಾಹಿನಿ, ಬೆಂಗಳೂರು: ದೇಶದಲ್ಲಿ ಬದಲಾವಣೆ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಗಾಂಧಿ ಹೆಸರು ಅಳಿಸೋಕೆ ಬಿಡಬಾರದು. ನಾವೆಲ್ಲರು ಒಟ್ಟಾಗಿ ಹೋರಾಟ ಮಾಡಬೇಕು. 60:40 ಶೇರ್ ಕೊಡಬೇಕು ಅಂತ ಕೇಂದ್ರ ನರೇಗಾ ಯೋಜನೆ ಬದಲಾವಣೆ ಮಾಡಿದೆ. ಇದರಿಂದ ರಾಜ್ಯದ ಮೇಲೆ 25 ಸಾವಿರ ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾಂಗ್ರೆಸ್ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, 21ನೇ ಶತಮಾನಕ್ಕೆ ಅಭಿವೃದ್ಧಿ ತಂದವರು ಕಾಂಗ್ರೆಸ್‌ನವರು.
ಬಿಜೆಪಿ ಕೊಡುಗೆ ಶೂನ್ಯ. ದೇಶ ಒಡೆಯೋದು, ಸಮಾಜ ಒಡೆಯೋದು, ಜಾತಿ ವ್ಯವಸ್ಥೆ ಹುಟ್ಟುಹಾಕಿದ್ದು ಇವಿಷ್ಟೇ ಬಿಜೆಪಿ ಕೊಡುಗೆ. ಚಾತುರ್ವರ್ಣ ವ್ಯವಸ್ಥೆ ಹುಟ್ಟುಹಾಕಿದ್ದು ಬಿಜೆಪಿಯವರೇ, ಸಮಾನ ಅವಕಾಶ ಬಂದಿದ್ದು ಸಂವಿಧಾನ ರಚನೆ ಆದಮೇಲೆ. ಭಾರತ ಪ್ರಜಾಪ್ರಭುತ್ವ ದೇಶ. ವಿಶ್ವದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಜಾಪ್ರಭುತ್ವ ಬೇರೆ ಕಡೆ ಇಲ್ಲ ಎಂದ ಅವರು ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವನ್ನ ಸ್ಮರಿಸಿದರು.
ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭ ಆಗಿತ್ತು. ಆಗ ಆರ್‌ಎಸ್‌ಎಸ್ ಜನಸಂಘ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಆರ್‌ಎಸ್‌ಎಸ್ ಅವರು ಬ್ರಿಟಿಷ್ ಜೊತೆ ಸೇರಿಕೊಂಡಿದ್ದರು. ಈಗ ಅವರು ನಮಗೆ ದೇಶಭಕ್ತಿ ಹೇಳಿಕೊಡ್ತಾರೆ. ಆರ್‌ಎಸ್‌ಎಸ್, ಜನಸಂಘದವರು ದೇಶಭಕ್ತರಲ್ಲ. ಆದ್ರೆ ಉದ್ದುದ್ದ ಭಾಷಣ ಬಿಗಿತಾರೆ. ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಇರಲಿಲ್ಲ. ಈಗ ಹಾಕಿಕೊಂಡಿದ್ದಾರೆ. ಈಗ ಗಾಂಧಿಯವರನ್ನ ದ್ವೇಷ ಮಾಡೋಕೆ ಶುರು ಮಾಡಿದ್ದಾರೆ. ಗಾಂಧಿಯನ್ನ ಕೊಂದವರು ಆರ್‌ಎಸ್‌ಎಸ್ ವಂಶಸ್ಥರಾದ ನಾಥೂರಾಮ್ ಗೋಡ್ಸೆ ಎಂದು ವಾಗ್ದಾಳಿ ನಡೆಸಿದರು.
