ಉದಯವಾಹಿನಿ, ಬೆಂಗಳೂರು: ಚಿನ್ನದ ಬೆಲೆ ಏರಿಕೆಯಾದಂತೆ ಬೆಳ್ಳಿ ಬೆಲೆ ಇದೀಗ ಸಾರ್ವಕಾಲಿಕ ದಾಖಲೆ ಬರೆದಿದೆ. ಒಂದು ಕೆ.ಜಿ ಬೆಳ್ಳಿ ಬೆಲೆ 2.5 ಲಕ್ಷ ರೂ.ಗೆ ಹೆಚ್ಚಾಗಿದ್ದು, ಹಿಂದಿನ ರೆಕಾರ್ಡ್‌ಗಳನ್ನೆಲ್ಲ ಉಡೀಸ್ ಮಾಡಿದೆ. ಬೆಂಗಳೂರಲ್ಲಿ ಒಂದು ಕೆ.ಜಿ ಬೆಳ್ಳಿಗೆ 2,50,200 ರೂ.ಯಾಗಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಈ ದರ ಏರಿಕೆಯಿಂದ ಜನರು ಶಾಕ್ ಆಗಿದ್ದಾರೆ. ಈ ಮೊದಲು ಏರಿಕೆಯಾಗಿದ್ದ ಎಲ್ಲಾ ಬೆಲೆಗಳನ್ನು ಬ್ರೇಕ್ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಮೊದಲು ಸಂಕ್ರಾಂತಿ ನಂತರ 2.5 ಲಕ್ಷ ರೂ.ಗೆ ಏರಿಕೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು.
ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿರುವುದು ಹಾಗೂ ಎಲೆಕ್ಟ್ರಿಕ್ ವೆಹಿಕಲ್ ಸೇರಿದಂತೆ ಹಲವೆಡೆ ಬೆಳ್ಳಿ ಬಳಕೆ ಹೆಚ್ಚಳವಾಗುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಈ ಕುರಿತು ತಜ್ಞರು ಮಾತನಾಡಿ, ಸದ್ಯಕ್ಕೆ ಬೆಳ್ಳಿ, ಬಂಗಾರ ಬೆಲೆಯ ನಾಗಾಲೋಟಕ್ಕೆ ಬ್ರೇಕ್ ಬೀಳುವ ಲಕ್ಷಣಗಳಿಲ್ಲ ಎಂದು ಅಂದಾಜಿಸಿದ್ದಾರೆ. ದೆಹಲಿ, ಜೈಪುರ, ಮುಂಬೈ, ಕೋಲ್ಕತ್ತಾ, ಚೆನ್ನೈ ಸೇರಿದಂತೆ ಹಲವೆಡೆ ಒಂದು ಕೆ.ಜಿ ಬೆಳ್ಳಿಗೆ 2.40 ಲಕ್ಷ ರೂ.ಯಿಂದ 2.50 ಲಕ್ಷ ರೂ.ವರೆಗೆ ಏರಿಕೆಯಾಗಿದೆ.
