ಉದಯವಾಹಿನಿ, ಶ್ರೀನಗರ: ಜೈಶ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಬಂಧಿಸಲು ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದೆ. ಜೈಶ್ ನ ಸ್ಥಳೀಯ ಕಮಾಂಡರ್ ಸೈಫುಲ್ಲಾ ಮತ್ತು ಆತನ ಸಹಾಯಕ ಆದಿಲ್ ಸೇರಿದಂತೆ ಇನ್ನು ಹಲವರು ಕಿಶ್ತ್ವಾರ್ ಬೆಟ್ಟಗಳಲ್ಲಿ ಅಡಗಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿರುವುದರಿಂದ ಕಿಶ್ತ್ವಾರ್‌ನ ಚತ್ರೂ ಉಪವಿಭಾಗದ ಹಳ್ಳಿಗಳನ್ನು ಸುತ್ತುವರಿದಿರುವ ಭದ್ರತಾ ಪಡೆ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ದೋಡಾ ಬೆಟ್ಟಗಳಲ್ಲಿ ಅಡಗಿರುವ ಭಯೋತ್ಪಾದಕರನ್ನು ತಟಸ್ಥಗೊಳಿಸಲು ಕಾರ್ಯಾಚರಣೆ ಆರಂಭಿಸಿರುವ ಭಾರತೀಯ ಸೇನೆಯು ಜೈಶ್ ನ ಸ್ಥಳೀಯ ಕಮಾಂಡರ್ ಸೈಫುಲ್ಲಾ ಮತ್ತು ಆತನ ಸಹಾಯಕ ಆದಿಲ್ ಗೆ ತಲಾ 5 ಲಕ್ಷ ರೂ. ಬಹುಮಾನವನ್ನು ಘೋಷಿಸಿದೆ.
ಕಿಶ್ತ್ವಾರ್‌ನ ಚತ್ರೂ ಉಪವಿಭಾಗದ ಹಳ್ಳಿಗಳನ್ನು ಸುತ್ತುವರಿದಿರುವ ಭಾರತೀಯ ಸೇನೆಯು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜಿಲ್ಲಾ ಕೇಂದ್ರ ಕಚೇರಿಯಿಂದ 35 ಕಿಮೀ ದೂರದಲ್ಲಿರುವ ಕಿಶ್ತ್ವಾರ್‌ನ ಕೇಶ್ವಾನ್‌ನಲ್ಲಿ ಹಾಗೂ ದೋಡಾದ ಸಿಯೋಜ್‌ಧರ್‌ನಲ್ಲಿಯೂ ಸೈನಿಕರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಕಳೆದ ಒಂದು ವಾರದಿಂದ ಚತ್ರೂ ಉಪವಿಭಾಗದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಭಾನುವಾರವೂ ಮುಂದುವರಿಯಲಿದೆ.ಪ್ರದೇಶವನ್ನು ಚೆನ್ನಾಗಿ ಅರಿತಿರುವ ಗ್ರಾಮಸ್ಥರು ಭಯೋತ್ಪಾದಕರನ್ನು ಪತ್ತೆಗೆ ಸೇನೆಯೊಂದಿಗೆ ಸಹಕರಿಸುತ್ತಿದ್ದಾರೆ. 2,000ಕ್ಕೂ ಹೆಚ್ಚು ಸೈನಿಕರು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಕಿಶ್ತ್ವಾರ್‌ನ ಪ್ಯಾಡರ್ ಉಪವಿಭಾಗವನ್ನು ಇಬ್ಬರು ಸ್ಥಳೀಯ ಭಯೋತ್ಪಾದಕರಾದ ಮುದ್ದಾಸಿರ್ ಮತ್ತು ರಿಯಾಜ್ ಜೊತೆ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಕಮಾಂಡರ್ ಜಹಿಂಗೀರ್ ಸರೂರಿಯ ಕೇಂದ್ರವೆಂದು ಕರೆಯಲಾಗುತ್ತದೆ. ಇವರ ಬಂಧನಕ್ಕೆ ತಲಾ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
