ಉದಯವಾಹಿನಿ, ಮಿರಿಯಾಲಗುಡ(ತೆಲಂಗಾಣ): ತೀವ್ರ ಜ್ವರದಿಂದ ಬಳಲುತ್ತಿದ್ದ ಮಗನಿಗೆ ಔಷಧಿ ನೀಡುತ್ತಿದ್ದಾಗ, ತಾಯಿ ತಪ್ಪಾಗಿ ಕುಡಿಯುವ ನೀರಿನ ಬದಲು ಪ್ರಯೋಗಾಲಯದಿಂದ ಅಪಾಯಕಾರಿ ರಾಸಾಯನಿಕ ತಂದು ನೀಡಿದ್ದಾಳೆ. ಮಗ ಎರಡು ಗುಟುಕು ಸೇವಿಸಿ, ಕೆಲವೇ ಕ್ಷಣಗಳಲ್ಲಿ ಪ್ರಾಣಬಿಟ್ಟಿದ್ದಾನೆ.ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡ ಪಟ್ಟಣದಲ್ಲಿ ಶನಿವಾರ ಇಂಥದ್ದೊಂದು ದಾರುಣ ಘಟನೆ ನಡೆಯಿತು.
ಘಟನೆಯ ಪೂರ್ಣ ವಿವರ: ಅನುಮುಲಾ ಮಂಡಲ ಎಂಬಲ್ಲಿನ ಚಿನ್ನ ಅನುಮುಲಾ ಗ್ರಾಮದ ಸತ್ಯಪ್ರಸಾದ್ ಮತ್ತು ರಾಮಲಿಂಗಮ್ಮ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ. ಮಗ ಗಣೇಶ್ (19) ಹೈದರಾಬಾದ್‌ನ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ಓದುತ್ತಿದ್ದ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಆತನನ್ನು ಮನೆಗೆ ಕರೆತರಲಾಗಿತ್ತು. ಶನಿವಾರ ಬೆಳಿಗ್ಗೆ ಮಿರಿಯಾಲಗುಡದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಜ್ವರ ಹೆಚ್ಚಾಗಿದ್ದರಿಂದ ಮೊದಲು ಪ್ಯಾರಸಿಟಮಾಲ್ ಮಾತ್ರೆ ನೀಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಗನಿಗೆ ಮಾತ್ರೆ ನೀಡಿದ ನಂತರ ತಾಯಿ ಕುಡಿಯುವ ನೀರು ತರಲು ಆಸ್ಪತ್ರೆಯಲ್ಲಿರುವ ನೀರಿನ ವಿತರಕಕ್ಕೆ ಹೋಗಿದ್ದಾರೆ. ಆದರೆ ಅದರಲ್ಲಿ ನೀರಿರಲಿಲ್ಲ.ಕುಡಿಯುವ ನೀರಿಗಾಗಿ ಹುಡುಕುತ್ತಾ ಹತ್ತಿರದ ಪ್ರಯೋಗಾಲಯಕ್ಕೆ ಹೋಗಿದ್ದಾರೆ. ಅಲ್ಲಿ ಡಬ್ಬಿಯೊಂದರಲ್ಲಿದ್ದ ಫಾರ್ಮಾಲ್ಡಿಹೈಡ್ ರಾಸಾಯನಿಕವನ್ನು ಕುಡಿಯುವ ನೀರೆಂದು ತಪ್ಪಾಗಿ ತಿಳಿದು, ತಾವು ತೆಗೆದುಕೊಂಡು ಹೋಗಿದ್ದ ಬಾಟಲಿಯಲ್ಲಿ ತುಂಬಿಸಿ, ಮಗನಿಗೆ ಕುಡಿಯಲು ಕೊಟ್ಟಿದ್ದಾರೆ. ಎರಡು ಗುಟುಕು ಕುಡಿದ ಮಗ ತೀವ್ರ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ.
ಆಸ್ಪತ್ರೆಯಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಅಪಾಯಕಾರಿ ರಾಸಾಯನಿಕವನ್ನು ಗಮನಿಸದೆ ನಿರ್ಲಕ್ಷ್ಯವಹಿಸಿದ್ದು ಸಾವಿಗೆ ಕಾರಣವೆಂದು ಆರೋಪಿಸಿ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಪೊಲೀಸರು ಆಗಮಿಸಿ ಕುಟುಂಬಸ್ಥರನ್ನು ಸಮಾಧಾನಪಡಿಸಿದರು. ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ನಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಸತ್ಯನಾರಾಯಣ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ನಾಗಭೂಷಣ ರಾವ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!