ಉದಯವಾಹಿನಿ, ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಭಾರತದ ರಕ್ಷಣಾ ಸಾಮರ್ಥ್ಯ ಏನೆಂಬುದು ಜಗತ್ತಿಗೇ ತೋರಿಸಿಕೊಟ್ಟಿದೆ. ಯುದ್ಧಭೂಮಿ ನಿಖರತೆ ಪ್ರದರ್ಶಿಸಿದ ಭಾರತದ ಶಕ್ತಿಗೆ ಬದ್ಧವೈರಿ ಹಾಗೂ ಬಲಾಢ್ಯ ರಾಷ್ಟ್ರಗಳೇ ಬೆಕ್ಕಸ ಬೆರಗಾಗಿವೆ. ಹೀಗಾಗಿ ಭಾರತ ರಕ್ಷಣಾ ವಲಯಕ್ಕೆ ಹೆಚ್ಚು ಮಹತ್ವ ನೀಡುತ್ತಿರುವ ಭಾರತ ಸರ್ಕಾರ ಈಗ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯವನ್ನ ಬಲಪಡಿಸಲು ಮಹತ್ವದ ಪ್ರಸ್ತಾವನೆಯೊಂದಕ್ಕೆ ಅನುಮೋದನೆ ನೀಡಿದೆ.ಹೌದು. ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿ (DAC) ಸುಮಾರು 79,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉತ್ಪನ್ನಗಳ ಖರೀದಿ ಮತ್ತು ಉನ್ನತೀಕರಿಸುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಯುದ್ಧ ಕಾರ್ಯಾಚರಣೆಯ ಸಾಮರ್ಥ್ಯ ಬಲಪಡಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಡಿಸಿಎ ತಿಳಿಸಿದೆ. ಈ ಯೋಜನೆಯಲ್ಲಿ ನೂತನ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಯೂ ಸೇರಿದೆ ಎಂದು ವರದಿಗಳು ತಿಳಿಸಿವೆ.
