ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ನುಸುಳುಕೋರರನ್ನು ಗುರುತಿಸುವ ಕೆಲಸ ಮಾಡಿ, ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ರಾಷ್ಟ್ರೀಯ ಗ್ರಿಡ್ ಅನ್ನು ರಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ, ನಾವು ಬಂಗಾಳದ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತೇವೆ. ನುಸುಳುಕೋರರನ್ನು ಗುರುತಿಸುವ ಕೆಲಸ ಮಾಡಿ, ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ರಾಷ್ಟ್ರೀಯ ಗ್ರಿಡ್ ರಚಿಸುತ್ತೇವೆ ಎಂದು ತಿಳಿಸಿದರು. ಕಳೆದ 15 ವರ್ಷಗಳಲ್ಲಿ ಬಂಗಾಳವು ಭಯ, ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಸಾಕ್ಷಿಯಾಗಿದೆ.
ಒಳನುಸುಳುವಿಕೆ ಜನರಲ್ಲಿ ಅಭದ್ರತೆ ಮತ್ತು ಆತಂಕವನ್ನು ಸೃಷ್ಟಿಸಿದೆ. ಈಗ ಮತದಾರರ ಮನಸ್ಸು ಬದಲಾಗಿದೆ, ಏಪ್ರಿಲ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ಜನರು ಭಯ, ಭ್ರಷ್ಟಾಚಾರ, ದುರಾಡಳಿತ ಮತ್ತು ಒಳನುಸುಳುವಿಕೆಗೆ ಬದಲಾಗಿ ಅಭಿವೃದ್ಧಿ, ಪರಂಪರೆ ಮತ್ತು ಬಡವರ ಕಲ್ಯಾಣದ ಮೇಲೆ ಕೇಂದ್ರೀಕರಿಸಿದ ಬಲವಾದ ಸರ್ಕಾರವನ್ನು ರಚಿಸಲು ದೃಢನಿಶ್ಚಯ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಿ, ಇವರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ, ಭಯ ಮತ್ತು ಒಳನುಸುಳುವಿಕೆ ಹೆಚ್ಚಾಗಿದ್ದು, ರಾಜ್ಯದ ಭದ್ರತೆಗೆ ಗಂಭೀರ ಬೆದರಿಕೆಯನ್ನುಂಟು ಮಾಡಿದೆ. ಸದ್ಯ ನಡೆಯುತ್ತಿರುವ ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ನಿಂತುಹೋಗಿದೆ. ಜೊತೆಗೆ ಪ್ರಧಾನಿ ಮೋದಿ ಅವರು ಪ್ರಾರಂಭಿಸಿದ ಎಲ್ಲಾ ಯೋಜನೆಗಳು ಇಲ್ಲಿನ ಟೋಲ್ ಸಿಂಡಿಕೇಟ್‌ಗೆ ಬಲಿಯಾಗಿವೆ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *

error: Content is protected !!