ಉದಯವಾಹಿನಿ, ತಿರುವಂತನಪುರಂ: ಶಬರಿಮಲೆ ದೇವಸ್ಥಾನದ ಚಿನ್ನ ಕಳ್ಳತನ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡಕ್ಕೆ ಇಬ್ಬರು ಅಧಿಕಾರಿಗಳನ್ನು ಸೇರಿಸಿಕೊಳ್ಳಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ.ತನಿಖಾ ತಂಡಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೇಣಿಯ ಇಬ್ಬರು ಅಧಿಕಾರಿಗಳನ್ನು ಸೇರಿಸಬೇಕೆಂದು ಕೋರಿ ಎಸ್‌ಐಟಿ ಮುಖ್ಯಸ್ಥರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಜಿಯಾದ್ ರೆಹಮಾನ್ ಎಎ ಮತ್ತು ನ್ಯಾ. ಎಂ.ಬಿ ಸ್ನೇಹಲತಾ ಅವರನ್ನೊಳಗೊಂಡ ರಜಾ ಪೀಠವು ಪುರಸ್ಕರಿದೆ.
ವಿಶೇಷ ತನಿಖಾ ತಂಡದ ಮುಖ್ಯಸ್ಥರು SITಗೆ ಇಬ್ಬರು ಅಧಿಕಾರಿಗಳನ್ನು ಸೇರಿಸಿಕೊಳ್ಳಲು ಕೇರಳ ಹೈಕೋರ್ಟ್ ಅನುಮತಿ ಕೋರಿ ವರದಿ ಸಲ್ಲಿಸಿದ್ದರು. ವರದಿಯನ್ನು ಪರಿಗಣಿಸಿದ ನಂತರ, ಇಬ್ಬರ ಅಧಿಕಾರಿಗಳ ಸೇರ್ಪಡೆಗೆ ಅನುಮತಿ ನೀಡಬಹುದು ಎಂದು ಭಾವಿಸುತ್ತೇವೆ ಎಂದು ಪೀಠ ಮೌಖಿಕವಾಗಿ ಆದೇಶಿಸಿದೆ. ಈ ಹಿಂದೆ ನ್ಯಾಯಾಲಯವು ಎಸ್‌ಐಟಿಗೆ ಆರು ವಾರಗಳ ಹೆಚ್ಚುವರಿ ಕಾಲಾವಕಾಶ ನೀಡಿ, ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುವಂತೆ ತಿಳಿಸಿತ್ತು.
ಏನಿದು ಪ್ರಕರಣ?
2019ರಲ್ಲಿ ಅಯ್ಯಪ್ಪ ಸ್ವಾಮಿಯ ದೇಗುಲದ ಎರಡು ಬಾಗಿಲು ಹಾಗೂ 2 ದ್ವಾರಪಾಲಕರಿಗೆ ಚಿನ್ನ ಮರು ಲೇಪನ ಮಾಡಲು ಯೋಜಿಸಲಾಗಿತ್ತು. ತಮಿಳುನಾಡು ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆ ಉಚಿತವಾಗಿ ಚಿನ್ನ ಮರುಲೇಪನ ಮಾಡೋದಾಗಿ ಮನವಿ ಮಾಡಿದ್ದರಿಂದ ಅದೇ ಕಂಪನಿಗೆ ಕೆಲಸ ಕೊಡಲಾಗಿತ್ತು.
ದೇಗುಲ ಬಿಡೋದಕ್ಕೂ ಮೊದಲು 2019ರ ಜುಲೈನಲ್ಲಿ ಚಿನ್ನದ ತೂಕ ಮಾಡಿದಾಗ 42.8 ಕೆಜಿ ಇತ್ತು. ಆದರೆ ಅದು ಕೇರಳದಿಂದ ಚೆನ್ನೈನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್ ತಲುಪಿದ ಬಳಿಕ ತೂಕ 38.25 ಕೆ.ಜಿ ಆಗಿತ್ತು. ಅಂದರೆ ಅಯ್ಯಪ್ಪನ ಗುಡಿ ಚಿನ್ನದ ಬಾಗಿಲು ಹಾಗೂ ದ್ವಾರಪಾಲಕರು ಕೇರಳದಿಂದ ಚೆನ್ನೈ ತಲುಪುವುದರೊಳಗೆ 39 ಕೆಜಿ ಆಗಿತ್ತಂತೆ. ಚೆನ್ನೈಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಸಿನಿಮಾ ನಟರು, ರಾಜಕಾರಣಿಗಳ ಮನೆಗೆ ಪೂಜೆಗೆ ಒಯ್ಯಲಾಗಿತ್ತು. ಈ ಗ್ಯಾಪ್‌ನಲ್ಲಿ ಚಿನ್ನ ಎಗರಿಸಿರುವ ಬಗ್ಗೆ ಆರೋಪಿ ತನಿಖೆ ವೇಳೆ ಬಾಯ್ಬಿಟ್ಟಿದ್ದ.
