ಉದಯವಾಹಿನಿ, ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಕೋಗಿಲು ಅತಿಕ್ರಮಣದಾರರಿಗೆ ಕೇವಲ ಎರಡೇ ದಿನದಲ್ಲಿ ಪರಿಹಾರ ವ್ಯವಸ್ಥೆಗೆ ಮುಂದಾಗಿರುವುದು ತುಷ್ಟೀಕರಣದ ಶರವೇಗವನ್ನು ತೋರ್ಪಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ರಾಜ್ಯದಲ್ಲಿ ರೈತರು, ಬೆಳೆಹಾನಿ ಸಂತ್ರಸ್ತರು ಮತ್ತು ಇತರೆ ನಿರಾಶ್ರಿತರು ಪರ್ಯಾಯ ವ್ಯವಸ್ಥೆ ಹಾಗೂ ಪರಿಹಾರಕ್ಕಾಗಿ ವರ್ಷಾನುಗಟ್ಟಲೆ ಕಾಯುತ್ತಿದ್ದಾರೆ. ಗೃಹಲಕ್ಷ್ಮಿ ಫಲಾನುಭವಿಗಳೂ ಗ್ಯಾರಂಟಿ ನಿಧಿಗಾಗಿ ಕಾಯುತ್ತಿದ್ದಾರೆ. ಆದರೆ, ಸರ್ಕಾರ ಕೋಗಿಲು ಅತಿಕ್ರಮಣದಾರರಿಗೆ ಮಾತ್ರ ಕ್ಷಣಾರ್ಧದಲ್ಲಿ ಪರಿಹಾರ, ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಮಿತಿಮೀರಿದ ಧರ್ಮ ಓಲೈಕೆ ಆಡಳಿತವನ್ನು ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಅತಿಕ್ರಮಣದಾರರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದಾಗಿ ಸಹ ಘೋಷಿಸಿದ್ದು, ಪ್ರತಿ ಮನೆಗೆ 8 ರಿಂದ 11 ಲಕ್ಷ ರೂ. ಮತ್ತು ಸಬ್ಸಿಡಿ ನೀಡುವುದಾಗಿ ಹೇಳಿದ್ದು, ಇದೊಂದು ಬಾರಿ ಪರಿಹಾರ ಕಲ್ಪಿಸಲಾಗುತ್ತದೆ ಎಂದಿರುವುದು ವಿಪರ್ಯಾಸ. ಸರ್ಕಾರದ್ದು ಅದ್ಯಾವ ರೀತಿಯ ಪರಿಹಾರ ಕ್ರಮ ಎಂದು ಜೋಶಿ ಪ್ರಶ್ನಿಸಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೇವಲ ಒಂದು ಧರ್ಮದ ಓಲೈಕೆಯಲ್ಲೇ ಮುಳುಗಿದೆ. ತುಷ್ಟೀಕರಣಕ್ಕಾಗಿ ಶರವೇಗದಲ್ಲಿ ಪರಿಹಾರ ಕ್ರಮ ಕೈಗೊಂಡಿದೆ. ಅಲ್ಲದೇ, ಔಪಚಾರಿಕ ಪರಿಹಾರ ನೀಡಲು ಮುಂದಾಗಿದ್ದು, ಅತಿ ಬೇಸರದ ಸಂಗತಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!