ಉದಯವಾಹಿನಿ,ಶಿಮ್ಲಾ : ಇಡೀ ದೇಶದ ಗಮನವನ್ನೇ ಸೆಳೆದಿದ್ದ ಇಂದಿರಾ ಗಾಂಧಿ ಮೆಡಿಕಲ್ ಕಾಲೇಜಿ ವೈದ್ಯ ಮತ್ತು ರೋಗಿಯ ನಡುವಿನ ಘರ್ಷಣೆ ಇದೀಗ ಸುಖಾಂತ್ಯ ಕಂಡಿದೆ. ವಿವಾದದ ಕೇಂದ್ರಬಿಂದುವಾಗಿದ್ದ ವೈದ್ಯ ರಾಘವ್ ನರುಲಾ ಮತ್ತು ರೋಗಿ ಅರ್ಜುನ್ ಪನ್ವಾರ್ ಪರಸ್ಪರ ಕ್ಷಮೆಯಾಚನೆ ಮಾಡಿಕೊಂಡಿದ್ದು, ಈ ಮೂಲಕ ವಿವಾದ ಶಾಂತಿಯುತವಾಗಿ ಅಂತ್ಯಗೊಂಡಿದೆ.ಸಂಧಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ರಾಘವ್ ನರುಲಾ, ಆ ಸಂದರ್ಭದಲ್ಲಿ ಎರಡೂ ಪಕ್ಷಗಳಿಂದಲೂ ತಪ್ಪುಗಳಾಗಿವೆ. ಈಗ ನಾವು ಮಾಡಿದ ತಪ್ಪುಗಳನ್ನು ಪರಸ್ಪರ ಅರ್ಥಮಾಡಿಕೊಂಡಿದ್ದೇವೆ ಹಾಗೂ ನಾವು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕ್ಷಮೆ ಕೂಡ ಕೇಳಿದ್ದೇವೆ. ಈಗ ಎಲ್ಲವೂ ಸರಿಯಾಗಿದೆ,” ಎಂದು ಹೇಳಿದ್ದಾರೆ.
ರೋಗಿ ಅರ್ಜುನ್ ಪನ್ವಾರ್ ಕೂಡ ವಿವಾದವು ಇತ್ಯರ್ಥಗೊಂಡಿರುವುದನ್ನು ದೃಢಪಡಿಸಿದ್ದಾರೆ. “ವೈದ್ಯರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ನಂತರ ನಾನು ಈ ವಿಷಯವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದ್ದೇನೆ. ಆಗ ನಿಖರವಾಗಿ ಏನಾಯಿತು ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ. ಕ್ಷಮೆಯಾಚನೆ ಮಾಡಿದ ಬಳಿಕ ಆ ವಿಷಯ ಅಷ್ಟರಲ್ಲೇ ಅಂತ್ಯಗೊಳ್ಳಬೇಕು,” ಎಂದು ಪನ್ವಾರ್ ಹೇಳಿದರು. ಅಷ್ಟೇ ಅಲ್ಲದೇ “ಶೀಘ್ರದಲ್ಲೇ ಡಾಕ್ಟರ್ ಸಾಹಬ್ ಅವರ ಮದುವೆಯಲ್ಲಿ ನನ್ನನ್ನೂ ನೋಡಬಹುದು,” ಎಂದು ಅವರು ತಿಳಿಸಿದ್ದಾರೆ.
