ಉದಯವಾಹಿನಿ, ಅಖ್ನೂರ್ : ವಿಪರೀತ ಚಳಿ, ಮಂಜು ಹಾಗೂ ಹೊಸವರ್ಷ ಹಿನ್ನೆಲೆಯಲ್ಲಿ ಬಿಎಸ್ಎಫ್ ಭದ್ರತೆಯನ್ನು ಹೆಚ್ಚಿಸಿದೆ. ಭಾರತದ ಗಡಿ ಪ್ರದೇಶಗಳಲ್ಲಿ ನಿಯೋಜಿಸಲ್ಪಟ್ಟಿರುವ ಮೊದಲ ಸಾಲಿನ ರಕ್ಷಣಾ ಪಡೆ ಆಗಿರುವ ಗಡಿ ಭದ್ರತಾ ಪಡೆ , ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಗಡಿ ಹಾಗೂ ನಿಯಂತ್ರಣ ರೇಖೆಗಳ ಮೇಲಿನ ನಿಗಾವನ್ನು ಮತ್ತಷ್ಟು ಹೆಚ್ಚಿಸಿದೆ. ಚಳಿಗಾಲದ ತೀವ್ರ ಚಳಿಯ ಹೊರತಾಗಿಯೂ ಭಯೋತ್ಪಾದಕರನ್ನು ನಿಗ್ರಹಿಸಲು ಹಿಮಾವೃತ ಎತ್ತರದ ಹಲವಾರು ಪ್ರದೇಶಗಳಲ್ಲಿ ಭಾರತೀಯ ಸೇನೆಯು ಸಮಾನಾಂತರ ಕಾರ್ಯಾಚರಣೆ ನಡೆಸುತ್ತಿರುವ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ.
ಎನ್‍ಡಿಟಿವಿ ವರದಿಯ ಪ್ರಕಾರ, ಹೊಸ ವರ್ಷದ ಸಂದರ್ಭದಲ್ಲಿ ದಟ್ಟವಾದ ಮಂಜು ಆವರಿಸಿರುವಾಗ ಗಡಿಯುದ್ದಕ್ಕೂ ಹಲವಾರು ಲಾಂಚ್‌ಪ್ಯಾಡ್‌ಗಳಿಂದ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರನ್ನು ಒಳನುಗ್ಗಿಸಲು ಪಾಕಿಸ್ತಾನ ಪ್ರಯತ್ನಿಸಬಹುದು ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ಉಗ್ಗರು ಒಳನುಸುಳಬಹುದಾದ ಜಾಲವನ್ನು ಇನ್ನಷ್ಟು ಬಲಪಡಿಸಲಾಗಿದ್ದು, ಗುರುತಿಸಲಾದ ಎಲ್ಲಾ ದುರ್ಬಲ ಸ್ಥಳಗಳನ್ನು ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಖ್ಯೂರ್ ವಲಯದಲ್ಲಿ ಬಿಎಸ್ಎಫ್ ಕಾರ್ಯಾಚರಣೆ ಹೇಗಿದೆ ಎಂದು ಹೇಳುವುದಾದರೆ, ಕಣ್ಣು ಮಿಟುಕಿಸದೆ ಕಾವಲು ಕಾಯಲಾಗುತ್ತಿದೆ. ಬಿಎಸ್‌ಎಫ್‌ನ ಮಹಿಳಾ ಸೈನಿಕರು ಕಾವಲು ಕಾಯುತ್ತಿದ್ದಾರೆ. ಮುಂದೆ ಇರುವ ಪ್ರದೇಶವನ್ನೇ ಅವರು ದಿಟ್ಟಿಸಿ ನೋಡುತ್ತಿದ್ದಾರೆ. ಈ ನಿರ್ಭೀತ ಮಹಿಳಾ ಸೈನಿಕರು ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದ ರೇಂಜರ್‌ಗಳಿಗೆ ಪಾಠ ಕಲಿಸಿದ್ದರು. ಅವರು ಪಾಕಿಸ್ತಾನಿ ರೇಂಜರ್‌ಗಳ ಸ್ಥಾನಗಳನ್ನು ನಾಶಪಡಿಸಿದ್ದು, ಅಖ್ನೂರ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಪಡೆಗಳು ಗ್ರಾಮಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಮಾಡಿದ ಪ್ರಯತ್ನಗಳನ್ನು ತಡೆದಿದ್ದಾರೆ. ಒಳನುಗ್ಗುವಿಕೆ ತಡೆಗಟ್ಟುವ ಜಾಲದಲ್ಲಿ ಅವರ ಭಾಗವಹಿಸುವಿಕೆಯಿಂದ ಬಿಎಸ್‌ಎಫ್‌ನ ಆಕ್ರಮಣ ಶಕ್ತಿ ಇನ್ನಷ್ಟು ತೀಕ್ಷ್ಣಗೊಂಡಿದ್ದು, ಶತ್ರುವಿನ ಮೇಲೆ ದಾಳಿ ನಡೆಸಲು ಸದಾ ಸಿದ್ಧವಾಗಿದೆ.

Leave a Reply

Your email address will not be published. Required fields are marked *

error: Content is protected !!