ಉದಯವಾಹಿನಿ, ಪಾಟ್ನಾ : ಅಪರೂಪದ ಮಾರ್ಷ್ ಮೊಸಳೆಯನ್ನು ಕಿಡಿಗೇಡಿಗಳು ಬೈಕ್‌ಗೆ ಕಟ್ಟಿ ಎಳೆದುಕೊಂಡು ಹೋಗಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಈ ಅಮಾನುಷ ಕೃತ್ಯದ ವಿಡಿಯೊವನ್ನು ಪೆಟಾ ಇಂಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಮಾರ್ಷ್ ಮೊಸಳೆಯ ಮೇಲಿನ ದೌರ್ಜನ್ಯ ಮತ್ತು ಹಿಂಸೆ ವನ್ಯಜೀವಿ ಪ್ರಿಯರ ಆಕ್ರೋಸಕ್ಕೆ ಕಾರಣವಾಗಿದೆ. ಈ ವಿಡಿಯೊದಲ್ಲಿ ವ್ಯಕ್ತಿಗಳಿಬ್ಬರು ಈ ಬೃಹತ್ ಸರೀಸೃಪವನ್ನು ಬೈಕ್‌ಗೆ ಕಟ್ಟಿ ತೆರೆದ ಮೈದಾನದಲ್ಲಿ ಎಳೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಬೇಸರದ ಸಂಗತಿ ಎಂದರೆ ಇವರಿಬ್ಬರು ಅಮಾನುಷವಾಗಿ ವರ್ತಿಸಿದರೂ ಸುತ್ತಮುತ್ತ ನೆರೆದಿದವರು ಇದನ್ನು ಖಂಡಿಸಿಲ್ಲ. ಗ್ರಾಮಸ್ಥರು ಅದನ್ನು ನೋಡುತ್ತಾ ನಿಂತಿದ್ದರೆ ಹೊರತು ಮೊಸಳೆಯ ರಕ್ಷಣೆಗೆ ಮುಂದೆ ಬಂದಿಲ್ಲ. ಆಹಾರ ಹುಡುಕುತ್ತ ಬಂದ ಮೊಸಳೆಯನ್ನು ಹಗ್ಗದಿಂದ ಕಟ್ಟಿ ಮೋಟಾರ್ ಬೈಕ್‍ಗೆ ಕ್ರೂರವಾಗಿ ಜೋಡಿಸಲಾಗಿದೆ. ನಂತರ, ಒಬ್ಬ ವ್ಯಕ್ತಿ ಬೈಕ್ ಬಳಸಿ ಮೊಸಳೆಯನ್ನು ಎಳೆಯಲು ಪ್ರಾರಂಭಿಸಿದನು. ಆತನಿಗೆ ಬ್ಯಾಲೆನ್ಸ್ ತಪ್ಪಿದಾಗ ಮತ್ತೊಬ್ಬ ಬಂದು ಬೈಕ್ ಚಲಾಯಿಸಿದ್ದು ವಿಡಿಯೊದಲ್ಲಿ ಕಂಡು ಬಂದಿದೆ. ಇದು ಮೊಸಳೆಯ ಜೀವಕ್ಕೆ ಗಂಭೀರ ಅಪಾಯವನ್ನುಂಟು ಮಾಡಿತು.
