ಉದಯವಾಹಿನಿ, ವಾಷಿಂಗ್ಟನ್: 200% ಟ್ಯಾರಿಫ್ ವಿಧಿಸುವುದಾಗಿ ಬೆದರಿಕೆ ಹಾಕಿ ಒಂದೇ ದಿನದಲ್ಲಿ ಭಾರತ-ಪಾಕ್ ಯುದ್ಧ ಕೊನೆಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದೆ ಪುನರುಚ್ಚಿಸಿದ್ದಾರೆ. ಫ್ಲೋರಿಡಾದಲ್ಲಿರುವ ಪಾಮ್ ಬೀಚ್‌ನ ಮಾರ್-ಎ-ಲಾಗೊ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ನಮ್ಮ ಆಡಳಿತ ಪ್ರಮುಖ ಪಾತ್ರವಹಿಸಿದೆ. ನನ್ನ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಒಟ್ಟು ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ.
ದಕ್ಷಿಣ ಏಷ್ಯಾದ ದೇಶಗಳಾದ ಭಾರತ ಮತ್ತು ಪಾಕಿಸ್ತಾನದ ಯುದ್ಧವನ್ನು ಕೊನೆಗೊಳಿಸಿದ್ದು ನಾನೇ. ಯುದ್ಧ ಎಷ್ಟು ಬೇಗ ಕೊನೆಗೊಂಡಿತು ಎಂದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದರು. ನಿಜಕ್ಕೂ ಒಂದೇ ದಿನದಲ್ಲಿ ಕೊನೆಗೊಳಿಸಿದೆ. ಈಗಿನಿಂದ ಎರಡು ದೇಶದೊಂದಿಗಿನ ವ್ಯಾಪಾರವನ್ನು ಕಡಿತಗೊಳಿಸಿ, 200% ಸುಂಕ ವಿಧಿಸುವುದಾಗಿ ಬೆದರಿಸಿದ್ದೆ. ಮಾರನೇ ದಿನವೇ ನನಗೆ ಕರೆಮಾಡಿ 35 ವರ್ಷಗಳ ಹೋರಾಟವನ್ನು ಕೊನೆಗೊಳಿಸುವುದಾಗಿ ತಿಳಿಸಿದರು ಎಂದಿದ್ದಾರೆ. ಇದೇ ವೇಳೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಯುದ್ಧವನ್ನು ಕೊನೆಗೊಳಿಸಿದ್ದೇನೆ. ಒಂದು ವೇಳೆ ಯುದ್ಧ ಮುಂದುವರಿದರೆ ವ್ಯಾಪಾರ ಕಡಿತಗೊಳಿಸಿ, ಸುಂಕವನ್ನು ಹೆಚ್ಚಿಸುವುದಾಗಿ ಬೆದರಿಕೆ ಹಾಕಿದ್ದೆ ಎಂದು ತಿಳಿಸಿದ್ದಾರೆ. ಮೇ 10ರಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಭಾರತ ಮತ್ತು ಪಾಕಿಸ್ತಾನ ಕದನಕ್ಕೆ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಘೋಷಿಸಿದ್ದರು. ಅದಾದ ಬಳಿಕ ಟ್ರಂಪ್ ಈವರೆಗೂ ಸುಮಾರು 70ಕ್ಕೂ ಹೆಚ್ಚು ಬಾರಿ ಈ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!