ಉದಯವಾಹಿನಿ, ತಿರುವನಂತಪುರಂ: ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಗಳ ತೆರವು ವಿಚಾರವಾಗಿ ಕರ್ನಾಟಕ ಮತ್ತು ಕೇರಳ ನಡುವೆ ಜಟಾಪಟಿ ನಡೆದಿದೆ. ಇದರ ಮಧ್ಯೆ, ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಸಿಎಂ ಹಾಗೂ ಕೇರಳ ಸಿಎಂ ಇಬ್ಬರೂ ವೇದಿಕೆ ಹಂಚಿಕೊಂಡಿದ್ದು, ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ವರ್ಕಲಾದ ಶಿವಗಿರಿ ಮಠದಲ್ಲಿ ಬುಧವಾರ ನಡೆದ 93ನೇ ಶಿವಗಿರಿ ತೀರ್ಥಯಾತ್ರೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಪ್ರತಿ ವರ್ಷ ಡಿಸೆಂಬರ್ 30 ರಿಂದ ಜನವರಿ 1 ರವರೆಗೆ ಮೂರು ದಿನಗಳ ಕಾಲ ತಿರುವನಂತಪುರದ ಶಿವಗಿರಿಯಲ್ಲಿ ಶಿವಗಿರಿ ತೀರ್ಥಯಾತ್ರೆ ನಡೆಯುತ್ತದೆ.
ಕೋಗಿಲು ಅಕ್ರಮ ಒತ್ತುವರಿ ಧ್ವಂಸ ಪ್ರಕರಣದ ರಾಜಕೀಯ ಘರ್ಷಣೆಯ ನಂತರ, ಸಿದ್ದರಾಮಯ್ಯ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒಂದೇ ವೇದಿಕೆಯನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಸಿದ್ದರಾಮಯ್ಯ ಅವರ ಭಾಷಣಕ್ಕೂ ಮೊದಲೇ ವಿಜಯನ್ ಕಾರ್ಯಕ್ರಮದಿಂದ ನಿರ್ಗಮಿಸಿದರು ಎಂದು ಮೂಲಗಳು ತಿಳಿಸಿವೆ. ಆದರೆ, ಹೊರಡುವ ಮೊದಲು ಕೇರಳ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರ ಬಳಿಗೆ ಹೋಗಿ ಆತ್ಮೀಯವಾಗಿ ಮಾತನಾಡಿದರು. ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ತಾವು ಹೊರಡಬೇಕಾದ ತುರ್ತು ಪರಿಸ್ಥಿತಿಯನ್ನು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿ ಹೊರಟರೆಂದು ತಿಳಿದುಬಂದಿದೆ.
