ಉದಯವಾಹಿನಿ, ಲಕ್ನೋ: ಅಯೋಧ್ಯೆಯ ರಾಮಮಂದಿರದಲ್ಲಿಂದು (ಡಿ.31) ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಹಿನ್ನೆಲೆ ವಿಶೇಷ ಅಭಿಷೇಕ, ಧಾರ್ಮಿಕ ಸ್ನಾನ ನೆರವೇರಲಿದೆ.
`ಪ್ರಾಣ ಪ್ರತಿಷ್ಠಾ ದ್ವಾದಶಿ’ ಎಂದು ಕರೆಯಲಾಗುವ ಈ ವಾರ್ಷಿಕೋತ್ಸವದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಇದೇ ವೇಳೆ ಅನ್ನಪೂರ್ಣ ಮಂದಿರದಲ್ಲಿ ರಾಜನಾಥ್ ಸಿಂಗ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ರಾಮ ಮಂದಿರ ಸಂಕೀರ್ಣದ ನಿರ್ಗಮನ ದ್ವಾರವಾದ ಅಂಗದ್ ತಿಲಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಮಾಹಿತಿ ನೀಡಿದ್ದು, ಪ್ರಾಣ ಪ್ರತಿಷ್ಠಾ ದ್ವಾದಶಿಯಂದೇ ಅಂದರೆ ಇಂದು (ಡಿ.31) ರಾಮಲಲ್ಲಾನ ವಿಗ್ರಹಕ್ಕೆ ವಿಶೇಷ ಅಭಿಷೇಕ ನಡೆಯಲಿದೆ. ಸುಮಾರು 4 ಗಂಟೆಗಳ ಕಾಲ ಆಚರಣೆ ನಡೆಯಲಿದೆ ಎಂದು ತಿಳಿಸಿದೆ.
ಮೊದಲ ಪ್ರತಿಷ್ಠಾಪನಾ ವಾರ್ಷಿಕೋತ್ಸವವನ್ನು 2025ರ ಜ.11ರಂದು ಆಚರಿಸಲಾಗಿತ್ತು. ಆದರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಎರಡನೇ ವಾರ್ಷಿಕೋತ್ಸವವು 2025ರ ಡಿ.31ರಂದು ಬಂದಿದೆ. ಈ ಹಿನ್ನೆಲೆ ಡಿ.27ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಯಜ್ಞಗಳು, ರಾಮಚರಿತಮಾನಸ ಪಠಣ ಮತ್ತು ರಾಮಲೀಲಾ ಪ್ರದರ್ಶನ, ಮೆರವಣಿಗೆ ಮತ್ತು ಭಜನೆ ಆಯೋಜನೆ ಮಾಡಲಾಗಿದೆ.
